ಬಿಡುಗಡೆಯಾಗಲಿರುವ 20 ರೂ.ಹೊಸನೋಟಿನ ಬಗ್ಗೆ ಗೊತ್ತಿರಬೇಕಾದ ವಿವರಗಳು ಇಲ್ಲಿವೆ

ಹೊಸದಿಲ್ಲಿ,ಜು.22: ಮಹಾತ್ಮಾ ಗಾಂಧಿ ಸರಣಿಯಲ್ಲಿ ಹೊಸ 20 ರೂ.ನೋಟುಗಳನ್ನು ಶೀಘ್ರವೇ ಬಿಡುಗಡೆಗೊಳಿಸುವುದಾಗಿ ಆರ್‌ಬಿಐ ಹೇಳಿದೆ. ನೂತನ ನೋಟು ಎರಡೂ ನಂಬರ್ ಪ್ಯಾನೆಲ್‌ಗಳಲ್ಲಿ ‘ಎಸ್’ ಅಕ್ಷರವನ್ನು ಹೊಂದಿದ್ದು, ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇರಲಿದೆ. ಇದರೊಂದಿಗೆ ಹಳೆಯ 20 ರೂ. ನೋಟುಗಳೂ ಚಲಾವಣೆಯಲ್ಲಿ ಮುಂದುವರಿಯಲಿವೆ.
ಹೊಸ 20 ರೂ.ನೋಟಿನ ವಿನ್ಯಾಸವು ಎಲ್ಲ ವಿಧಗಳಲ್ಲಿ ಈ ಹಿಂದಿನ ಗಾಂಧಿ ಸರಣಿಯ ನೋಟುಗಳಂತೆಯೇ ಇರಲಿದೆ. ಎರಡೂ ಕಡೆಗಳಲ್ಲಿ ನೋಟಿನ ಸಂಖ್ಯೆಯಲ್ಲಿನ ಅಂಕಿಗಳು ಗಾತ್ರದಲ್ಲಿ ಎಡದಿಂದ ಬಲಕ್ಕೆ ಹಿರಿದಾಗುವ ಕ್ರಮದಲ್ಲಿರಲಿದ್ದು, ಈ ಸಂಖ್ಯೆಗಳ ಹಿಂದಿರುವ ಅಕ್ಷರ ಮತ್ತು ಅಂಕೆಗಳು ಒಂದೇ ಗಾತ್ರದಲ್ಲಿರುತ್ತವೆ.
ಈ ಹಿಂದಿನ 20 ರೂ.ನೊಟುಗಳು ಇಂಟಾಗ್ಲಿಯೊ ಮುದ್ರಣವನ್ನು ಹೊಂದಿದ್ದರೆ ಹೊಸ ನೋಟುಗಳು ಆಫ್‌ಸೆಟ್‌ನಲ್ಲಿ ಮುದ್ರಣಗೊಂಡಿರುತ್ತವೆ.
ಈ ಮೊದಲು ಇಂಟಾಗ್ಲಿಯೊದಲ್ಲಿ ಉಬ್ಬಿದ ಮುದ್ರಣದಲ್ಲಿರುತ್ತಿದ್ದ ‘20’ ಸಂಖ್ಯೆ, ಆರ್‌ಬಿಐ ಮೊಹರು, ಮಹಾತ್ಮಾ ಗಾಂಧಿಯವರ ಚಿತ್ರ, ಆರ್‌ಬಿಐ ಬರಹ, ಗ್ಯಾರಂಟಿ ಮತ್ತು ಭರವಸೆ, ಗವರ್ನರ್ ಸಹಿ, ಅಶೋಕ ಸ್ತಂಭ ಲಾಂಛನ ಇವು ಆಫ್‌ಸೆಟ್‌ನಲ್ಲಿ ಉಬ್ಬಿದ ಮುದ್ರಣ ಹೊಂದಿರುವುದಿಲ್ಲ.
ನೋಟಿನ ಹಿಂಬದಿಯ ವರ್ಣದಲ್ಲಿ ಯಾವುದೇ ಬದಲಾವಣೆ ಇರುವದಿಲ್ಲವಾದರೂ ಇಂಟಾಗ್ಲಿಯೊ ಮುದ್ರಣವನ್ನು ಕೈಬಿಟ್ಟಿರುವುದರಿಂದ ಮುಂಬದಿಯಲ್ಲಿ ವರ್ಣವು ತಿಳಿಯಾಗಿರುತ್ತದೆ.
ಮಹಾತ್ಮಾ ಗಾಂಧಿ ಸರಣಿ-2005ರ ಹೊಸ 20 ರೂ.ನೋಟುಗಳನ್ನು ಆರ್‌ಬಿಐ 2016ರಲ್ಲಿ ಬಿಡುಗಡೆಗೊಳಿಸಿತ್ತು. ಅಲ್ಲಿಂದೀಚೆಗೆ ಹೊಸ 20 ರೂ.ನೋಟುಗಳಲ್ಲಿ ಮಹಾತ್ಮಾ ಗಾಂಧಿ ಚಿತ್ರದ ಬಲಭಾಗದಲ್ಲಿಯ ಸ್ತಂಭದಲ್ಲಿ ಮುಖಬೆಲೆಯನ್ನು ಸೂಚಿಸುವ ಸಂಖ್ಯೆಯನ್ನು ತೋರಿಸುವ ಅವ್ಯಕ್ತ ಚಿತ್ರವಿರುವುದಿಲ್ಲ. ಇದಕ್ಕೂ ಮೊದಲಿನ 20 ರೂ.ನೋಟುಗಳಲ್ಲಿ ಈ ಚಿತ್ರವು ಕಣ್ಣಿನ ಮಟ್ಟಕ್ಕೆ ಅಡ್ಡವಾಗಿ ಹಿಡಿದು ನೋಡಿದರೆ ಮಾತ್ರ ಕಂಡು ಬರುತ್ತಿತ್ತು.
20 ರೂ.ನೋಟು ಹಿಂಭಾಗದಲ್ಲಿ ಮುದ್ರಣಗೊಂಡ ವರ್ಷವನ್ನು ಹೊಂದಿರುತ್ತದೆ. ನೋಟಿನ ಹಿಂಭಾಗದಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.







