ಸೂಕ್ತ ತನಿಖೆಗಾಗಿ ಎಸಿಬಿಗೆ ದೂರು
ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಆರೋಪ ಪ್ರಕರಣ
ಬೆಂಗಳೂರು, ಜು.21: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಕೋರಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.
ಶುಕ್ರವಾರ ಸಂಜೆ ನಗರದ ಖನಿಜ ಭವನದಲ್ಲಿರುವ ಎಸಿಬಿ ಕೇಂದ್ರ ಕಚೇರಿಯಲ್ಲಿ ಹೈಕೋರ್ಟ್ ವಕೀಲ ನಟರಾಜ ಶರ್ಮಾ ಎಂಬುವರು ದೂರು ನೀಡಿದ್ದು, ಪರಪ್ಪನ ಅಗ್ರಹಾರ ಜೈಲು ಪ್ರಕರಣ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತಿಯ ಅಂಚಿನಲ್ಲಿದ್ದ ಡಿಜಿಪಿ ಸತ್ಯನಾರಾಯಣ ರಾವ್ ಮೇಲೆ ಡಿಐಜಿ ರೂಪಾ ಮಾಡಿರುವ ಆರೋಪಗಳ ತನಿಖೆ ಆಗಬೇಕು. ಪ್ರಮುಖವಾಗಿ 2 ಕೋಟಿ ರೂ. ಲಂಚ ಹಾಗೂ ಮಾದಕ ವಸ್ತುಗಳ ಸಾಗಾಟ-ಮಾರಾಟದ ಕುರಿತು ಪಾರದರ್ಶಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಈಗಾಗಲೇ ರಾಜ್ಯ ಸರಕಾರ ಜೈಲು ಅವಾಂತರದಿಂದ ಸಾಕಷ್ಟು ಮುಜುಗರ ಪಡುವಂತಾಗಿದೆ. ಹೀಗಾಗಿ ಈಗಾಗಲೇ ಸರಕಾರ ಅಧಿಕಾರಿಗಳ ವರ್ಗಾವಣೆ ಮಾಡಿದೆ ಎಂದ ಅವರು, ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಪ್ರಕರಣ ಸಂಬಂಧ ದಾಖಲೆಗಳನ್ನು ಎಸಿಬಿಗೆ ಸಲ್ಲಿಸಬೇಕೆಂದು ಹೇಳಿದರು.





