ರೈತರಿಂದ ಪ್ರತಿಭಟನಾ ಮೆರವಣಿಗೆ

ಚಿಕ್ಕಬಳ್ಳಾಪುರ, ಜು.21: ಕಳೆದ 37 ವರ್ಷಗಳ ಹಿಂದೆ ನರಗುಂದ ಮತ್ತು ನವಲಗುಂದದಲ್ಲಿ ರೈತರ ಮೇಲೆ ನಡೆದ ಗೋಲಿಬಾರನ್ನು ಖಂಡಿಸಿ, ರೈತ ಹುತಾತ್ಮ ದಿನಾಚರಣೆ ಆಚರಿಸಿದ ಇಲ್ಲಿನ ರೈತ ಸಂಘದ ಕಾರ್ಯಕರ್ತರು, ನಗರದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಇಂತಹ ದುರ್ಘಟನೆಗಳು ಮರುಕಳಿಸದಂತೆ ಪ್ರಸ್ತುತದ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕೆಂದು ಎಚ್ಚರಿಸಿದರು.
ನಗರದ ಜೂನಿಯರ್ ಕಾಲೇಜು ಆರಣದಿಂದ ಪ್ರತಿಭಟನಾ ಮೆರವಣಿಯಲ್ಲಿ ತೆರಳಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಶಿಡ್ಲಘಟ್ಟ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕೆಲಕಾಲ ರಸ್ತೆ ತಡೆ ನಡೆಸಿದರು. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದ ಮನವಿ ಸಲ್ಲಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾಧ್ಯಕ್ಷೆ ಸಿ.ಎನ್. ಸುಶ್ಮಾ ಶ್ರೀನಿವಾಸ್, ಕಳೆದ 37 ವರ್ಷಗಳ ಹಿಂದೆ ನ್ಯಾಯುಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಂದಿನ ಗುಂಡೂರಾವ್ ನೇತೃತ್ವದ ಸರ್ಕಾರವು ಗೋಲಿಬಾರ್ ನಡೆಸುವ ಮೂಲಕ ಸುಮಾರು 153 ರೈತರನ್ನು ಬಲಿಪಡೆದಿರುವುದು ದೇಶಕ್ಕೆ ಅನ್ನ ನೀಡುವ ರೈತರ ದುಸ್ಥಿತಿಯನ್ನು ಬಿಂಬಿಸುವುದು ಎಂದು ಬೇಸರ ವ್ಯಕ್ತಪಡಿಸಿದರು.
ಸತತ ಬರದಿಂದಾಗಿ ಪ್ರಸ್ತುತ ದಿನಗಳಲ್ಲಿ ರೈತರ ಜೀವನವು ಸಂಕಷ್ಟಗಳ ಪಾಲಾಗಿದೆ. ಅಲ್ಲದೆ ಲಭ್ಯವಿರುವ ನೀರಿನಲ್ಲಿಯೇ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ಸಿಗದೇ ರೈತ ಕಂಗಾಲಾಗಿದ್ದಾನೆ. ಇದರ ನಡುವೆ ಸರ್ಕಾರಗಳು ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿರುವುದರಿಂದ ರೈತರು ಆತ್ಮಹತ್ಯೆಯಂತಹ ಹೇಯ ಕೃತ್ಯಗಳಿಗೆ ಕೈಹಾಕುವ ದುಸ್ಥಿತಿಗೆ ತಲುಪಿದ್ದಾನೆ ಎಂದ ಅವರು, ರೈತರ ಸಾವಿಗೆ ಸರ್ಕಾರಗಳ ಕಾರಣವೆಂದು ಆಕ್ರೋಷ ವ್ಯಕ್ತಪಡಿಸಿದರು.
ಸಾಲದೆಂಬಂತೆ ಕಳೆದ ಹಲವು ದಶಕಗಳಿಂದ ಬಯಲು ಸೀಮೆ ಭಾಗದ ರೈತರು ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸುವಂತೆ ನಾನಾರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದ್ದರೂ ಯಾವುದೇ ಸರ್ಕಾರವು ಈ ಭಾಗಕ್ಕೆ ಸೂಕ್ತವಾದ ನೀರಾವರಿ ಯೋಜನೆಯನ್ನು ಜಾರಿಗೊಳಿಸದೇ ರೈತರ ಸಮಸ್ಯೆಗಳನ್ನು ಕಡೆಗಣಿಸಿವೆ ಎಂದು ಆರೋಪಿಸಿದ ಅವರು, ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂಧಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಆರೋಗ್ಯ ಹಾನಿಕಾರಕವಾದ ಸಿಗರೇಟ್ ಮತ್ತಿತರ ವಸ್ತುಗಳ ಬೆಲೆ ನಿಗಧಿಪಡಿಸುವ ಅವಕಾಶವಿರುವಂತೆ ರೈತರು ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗಧಿಪಡಿಸಬೇಕೆಂದು ಒತ್ತಾಯಿಸಿದ ಅವರು, ರೈತರ ಸಮಸ್ಯೆ ಬಗೆಹರಿಸಲು ಸರ್ಕಾರಗಳು ನಿರ್ಲಕ್ಷ್ಯ ವಹಿಸಿದಲ್ಲಿ ಸಂಘದಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ನರಗುಂದ ಮತ್ತು ನವಲಗುಂದದಲ್ಲಿ ಹುತಾತ್ಮರಾದ ರೈತರ ಆತ್ಮಕ್ಕೆ ಶಾಂತಿಕೋರಿದರು.
ಈ ಸಂದರ್ಭದಲ್ಲಿ ಕವಿತಾ, ಮಧುಸೂಧನ್, ಕಿರಣ್, ವರುಣ್, ಚಂದ್ರ, ನಾಗೇಶ್, ಮಹಾಲಕ್ಷ್ಮಮ್ಮ ಚಂದ್ರಶೇಖರ್, ಉಮೇಶ್, ಗಣೇಶ್, ಲೋಕೇಶ್, ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು.







