ರೈಲ್ವೇ ನೀಡುವ ಆಹಾರ ಮಾನವರು ಸೇವಿಸಲು ಯೋಗ್ಯವಲ್ಲ
ಆಘಾತಕಾರಿ ವರದಿ ನೀಡಿದ ಸಿಎಜಿ

ಹೊಸದಿಲ್ಲಿ, ಜು. 21: ರೈಲ್ವೇ ನೀಡುವ ಆಹಾರ ಮಾನವರು ಸೇವಿಸಲು ಯೋಗ್ಯವಲ್ಲ ಎಂದು ಭಾರತೀಯ ರೈಲ್ವೇಯ ಕ್ಯಾಟರಿಂಗ್ ಸೇವೆ ಬಗ್ಗೆ ಸಂಸತ್ತಿನಲ್ಲಿ ಶುಕ್ರವಾರ ಮಹಾ ಲೇಖಪಾಲರು ಸಲ್ಲಿಸಿದ ಲೆಕ್ಕಪರಿಶೋಧನೆ ವರದಿಯಲ್ಲಿ ಹೇಳಲಾಗಿದೆ.
ರೈಲ್ವೇಯಲ್ಲಿ ಕಲುಷಿತ, ಬಳಸಿದ ಆಹಾರ ನೀಡಲಾಗುತ್ತದೆ. ಪ್ಯಾಕ್ ಮಾಡಲಾದ ಹಾಗೂ ಬಾಟಲಿಗಳ ವಾಯಿದೆ ಮುಗಿದಿರುತ್ತದೆ. ಅಲ್ಲದೆ ಅನಧಿಕೃತ ಬ್ರಾಂಡ್‌ನ ನೀರಿನ ಬಾಟಲಿಗಳನ್ನು ರೈಲ್ವೇ ನಿಲ್ದಾಣಗಳಲ್ಲಿ ಮಾರಲಾಗುತ್ತದೆ ಎಂದು ಅದು ಹೇಳಿದೆ.
ರೈಲ್ವೇಯ ಕ್ಯಾಟರಿಂಗ್ ನೀತಿಯಲ್ಲಿ ಆಗಾಗ ಬದಲಾವಣೆ ಮಾಡಲಾಗುತ್ತದೆ ಎಂಬುದು ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ. ಇದು ಪ್ರಯಾಣಿಕರಿಗೆ ನೀಡುವ ಕ್ಯಾಟರಿಂಗ್ ಸೇವೆಯಲ್ಲಿ ಅನಿಶ್ಚಿತತೆ ಸೃಷ್ಟಿಸುತ್ತದೆ. ಪರಿಶೀಲನೆ ಸಂದರ್ಭ ಸ್ವಚ್ಛತೆ ಹಾಗೂ ನೈರ್ಮಲ್ಯ ನಿರ್ವಹಿಸದೇ ಇರುವುದು ಕಂಡು ಬಂದಿದೆ. ರೈಲುಗಳಲ್ಲಿರುವ ಕ್ಯಾಟರರ್ಸ್ ಪೂರೈಸಲಾದ ಆಹಾರಕ್ಕೆ ಬಿಲ್ ನೀಡುವುದಿಲ್ಲ. ಅಲ್ಲದೆ ಆಹಾರದ ಗುಣಮಟ್ಟ ತೀರ ಕಳಪೆಯಾಗಿದೆ ಎಂದು ಲೆಕ್ಕ ಪರಿಶೋಧನೆಯಲ್ಲಿ ತಿಳಿದುಬಂದಿದೆ.
ಆಯ್ಕೆ ಮಾಡಲಾದ 74 ರೈಲ್ವೇ ನಿಲ್ದಾಣ ಹಾಗೂ 80 ರೈಲುಗಳಲ್ಲಿ ಸಿಎಜಿ ಹಾಗೂ ರೈಲ್ವೇ ತಂಡ ನಡೆಸಿದ ಜಂಟಿ ಪರಿಶೀಲನೆಯಲ್ಲಿ ರೈಲು ನಿಲ್ದಾಣ ಹಾಗೂ ರೈಲುಗಳಲ್ಲಿ ಇರುವ ಕ್ಯಾಟರರ್ಸ್‌ಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ನಿರ್ವಹಿಸುತ್ತಿಲ್ಲ ಎಂಬುದು ಕಂಡು ಬಂದಿದೆ. ಮೃದು ಪಾನೀಯ ಸಿದ್ಧಪಡಿಸಲು ನೇರ ನಳ್ಳಿಯಿಂದ ಪಡೆದ ಶುದ್ಧೀಕರಿಸದ ನೀರು ಬಳಸಲಾಗುತ್ತದೆ. ಕಸದ ಬುಟ್ಟಿ ಮುಚ್ಚುತ್ತಿಲ್ಲ, ದಿನಂಪ್ರತಿ ಖಾಲಿ ಮಾಡುತ್ತಿಲ್ಲ, ಸ್ವಚ್ಛಗೊಳಿಸುತ್ತಿಲ್ಲ. ಆಹಾರ ಪದಾರ್ಥಗಳಿಗೆ ನೊಣ, ಕೀಟ, ಧೂಳು, ಇಲಿ, ಜಿರಳೆಯಿಂದ ರಕ್ಷಣೆ ನೀಡಿಲ್ಲ ಎಂಬುದು ಲೆಕ್ಕ ಪರಿಶೋಧನೆಯಲ್ಲಿ ಬಹಿರಂಗವಾಗಿದೆ.







