ಬಿತ್ತನೆ ಬೀಜಗಳು ಮಾರಾಟದ ಸರಕಲ್ಲ: ನಾರಾಯಣರೆಡ್ಡಿ
ಬೆಂಗಳೂರು, ಜು.21: ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡ ನಂತರ ನಮ್ಮ ದೇಶದಲ್ಲಿ ಬಿತ್ತನೆ ಬೀಜಗಳು ಮಾರಾಟದ ವಸ್ತುವಾಗಿದೆ ಎಂದು ಸಾವಯವ ಕೃಷಿಕ ನಾರಾಯಣರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದ ನ್ಯಾಷನಲ್ ಕಾಲೇಜಿನಲ್ಲಿ ದಿ ಬೆಂಗಳೂರು ಸೈನ್ಸ್ ಫೋರಂ ವತಿಯಿಂದ ಆಯೋಜಿಸಿದ್ದ ‘ನೈಸರ್ಗಿಕ ಕೃಷಿಯಲ್ಲಿ ನನ್ನ ಅನುಭವ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, 50 ವರ್ಷಗಳ ಹಿಂದೆ ರೈತರು ಕೃಷಿ ಮಾಡಲು ಬೀಜಗಳನ್ನು ಕೊಂಡುಕೊಳ್ಳುತ್ತಿರಲಿಲ್ಲ. ಬದಲಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ, ಇಂದು ಬೀಜಗಳನ್ನೇ ಮಾರಾಟಕ್ಕಿಡಲಾಗಿದೆ ಎಂದು ಖೇದ ವ್ಯಕ್ತಪಡಿಸಿದರು. 70-80 ರ ದಶಕದಲ್ಲಿ ಒಂದು ಎಕರೆ ಟಮೋಟೊ ಬೀಜಕ್ಕಾಗಿ 60 ರೂ.ಗಳು ಸಾಕಾಗಿತ್ತು. ಆದರೆ, ಇಂದು 10 ಸಾವಿರ ರೂ. ಬೀಜಗಳಿಗೆ ಬೇಕು. ಇಷ್ಟಲ್ಲದೆ, ರಾಸಾಯನಿಕ ಗೊಬ್ಬರ, ಔಷಧಗಳಿಗೆ ಸಾವಿರಾರು ರೂ.ಗಳೇ ಬೇಕಾಗಿದೆ. ರೈತರಲ್ಲಿ ಹೆಚ್ಚುತ್ತಿರುವ ದುರಾಸೆಯಿಂದಾಗಿ ರಾಸಾಯನಿಕ ಕೃಷಿ ಅಳವಡಿಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ವಿಷಕಾರಿ ಆಹಾರ ದೇಹಕ್ಕೆ ಸೇರುತ್ತಿದೆ. ಹಾಗಲಕಾಯಿ, ಆಲೂಗಡ್ಡೆ, ಟಮೋಟೊ ರುಚಿಯಲ್ಲಿ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದರು.
ಇಂದಿನ ವಿಜ್ಞಾನ ಹಲವಾರು ಆವಿಷ್ಕಾರಗಳನ್ನು ಕೈಗೊಂಡಿದ್ದು, ಹಲವು ಉಪಯುಕ್ತ ಮಾಹಿತಿಯನ್ನು ಸಮಾಜಕ್ಕೆ ನೀಡಿದೆ. ಆದರೆ, ಇಂದಿನ ಕೃಷಿ ಪದ್ಧತಿಯಲ್ಲಿ ವಿಜ್ಞಾನ ರೈತರನ್ನು ಸಂಪೂರ್ಣ ದಾರಿ ತಪ್ಪಿಸುವ ಕಡೆಗೆ ಕರೆದುಕೊಂಡು ಹೋಗುತ್ತಿದೆ, ಇದು ಅಪಾಯಕಾರಿ ಬೆಳವಣಿಗೆ ಎಂದು ದೂರಿದರು. ಕೃಷಿ ಕುರಿತು ಸಂಶೋಧನೆಗಳನ್ನು ಮಾಡುತ್ತಿರುವ ಇಂದಿನ ವಿಜ್ಞಾನಿಗಳು ತಪ್ಪು ಸಲಹೆಗಳನ್ನು ನೀಡುತ್ತಿದ್ದಾರೆ. ಮಣ್ಣಿನ ಫಲವತ್ತತೆ ಕಾಪಾಡುವ ಲಕ್ಷಾಂತರ ಜೀವಿಗಳ ಕುರಿತು, ಅದರ ಉಪಯೋಗಗಳ ಕುರಿತು ವಿಜ್ಞಾನಿಗಳು ತಿಳಿಸುತ್ತಿಲ್ಲ ಎಂದ ಅವರು, ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವಲ್ಲಿ ಜನರು ವಿಫಲರಾಗಿದ್ದಾರೆ. ಅದರ ಪರಿಣಾಮವಿಂದು 1500 ಅಡಿಗಳವರೆಗೂ ಅಂತರ್ಜಲದ ಕೊರತೆ ಕಾಡುತ್ತಿದೆ ಎಂದು ತಿಳಿಸಿದರು. ಮನುಷ್ಯನಿಗೆ ಮೂಲಭೂತವಾಗಿ ಸರಳ ಜೀವನ ಅಳವಡಿಸಿಕೊಂಡು, ನಿರ್ದಿಷ್ಟ ಗುರಿಯೊಂದಿಗೆ ಜೀವನ ಆರಂಭ ಮಾಡಿದಾಗ ಮಾತ್ರ ಪರಿಪೂರ್ಣ ಮನುಷ್ಯನಾಗುತ್ತಾನೆ. ನನಗೆ 76 ವರ್ಷ ವಯಸ್ಸಾಗಿದೆ. ಆದರೆ, ಇದುವರೆಗೂ ನಾನು ಕಾರು, ಬೈಕ್ ಬಳಸಿಲ್ಲವಾದರೂ, ತಲುಪಬೇಕಾದ ಸ್ಥಳಕ್ಕೆ ನಿರ್ದಿಷ್ಟ ಸಮಯಕ್ಕೆ ಹೋಗುತ್ತೇನೆ. ನಾವು ಎಷ್ಟು ಓದಿದ್ದೇವೆ, ಎಷ್ಟು ಸಂಪಾದನೆ ಮಾಡುತ್ತೇವೆ ಎಂಬುದು ಮುಖ್ಯವಲ್ಲ. ಅದರಲ್ಲಿ ನಾವೆಷ್ಟು ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ದೇಶದಲ್ಲಿ ಮತ್ತೊಮ್ಮೆ ಎರಡನೇ ಮಹಾಯುದ್ದ ನಡೆದರೂ, ವಿದ್ಯುತ್ ಇಲ್ಲದಿದ್ದರೂ ಚಿಂತೆಯಿಲ್ಲದೆ ನಾನು ಬದುಕಬಲ್ಲೆ. ಯಾಕೆಂದರೆ ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿರುವ ನಮ್ಮ ಆಹಾರ ಸಂಸ್ಕೃತಿಯನ್ನು ನಾನು ಇಂದಿಗೂ ಮುಂದುವರಿಸಿದ್ದೇನೆ. ಅಲ್ಲದೆ, ಇಂದಿನ ರೋಗಯುಕ್ತ ಆಹಾರವನ್ನು ತಿರಸ್ಕರಿಸಿದ್ದೇನೆ ಎಂದು ನುಡಿದರು.
ಆಳುತ್ತಿರುವ ಸರಕಾರಗಳಿಗೆ ಧೈರ್ಯವಿದ್ದರೆ ನನ್ನ ಕೈಗೆ ಕೇವಲ 6 ತಿಂಗಳು ಅಧಿಕಾರ ಕೊಟ್ಟರೆ, ಮೊತ್ತ ಮೊದಲಿಗೆ ರಸಗೊಬ್ಬರ ಮತ್ತು ಕೀಟನಾಶಗಳನ್ನು ಬ್ಯಾನ್ ಮಾಡುತ್ತೇನೆ. ಅನಗತ್ಯವಾಗಿ ರೈತರು ಸಾಲ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ಸಾಲ ಮನ್ನಾ ಮಾಡಬಾರದಿತ್ತು ಎಂದು ಹೇಳಿದರು.







