ತೊಟ್ಟಿಲುಗಳಲ್ಲಿ 205 ಅನಪೇಕ್ಷಿತ ಶಿಶುಗಳ ಸ್ವೀಕಾರ: ಮೇನಕಾ ಗಾಂಧಿ

ಹೊಸದಿಲ್ಲಿ,ಜು.21: 11 ರಾಜ್ಯಗಳಲ್ಲಿಯ ವಿವಿಧ ಆಸ್ಪತ್ರೆಗಳು ಮತ್ತು ಅನಾಥಾಶ್ರಮ ಗಳಲ್ಲಿಯ 265 ತೊಟ್ಟಿಲು ಮಗು ಸ್ವೀಕಾರ ಕೇಂದ್ರಗಳಲ್ಲಿ 205 ‘ಅನಪೇಕ್ಷಿತ’ ಶಿಶುಗಳು ದೊರಕಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದರು. ಆದರೆ ಯಾವ ಅವಧಿಯಲ್ಲಿ ಈ ಶಿಶುಗಳನ್ನು ಸ್ವೀಕರಿಸಲಾಗಿತ್ತು ಎನ್ನುವುದನ್ನು ಅವರು ಹೇಳಲಿಲ್ಲ.
ಹೆತ್ತವರು ತಮ್ಮ ಅನಪೇಕ್ಷಿತ ಶಿಶುಗಳನ್ನು ಸುರಕ್ಷಿತವಾಗಿ ತೊರೆಯಲು ಸಾಧ್ಯವಾಗುವಂತೆ ತಮ್ಮ ಕಟ್ಟಡಗಳ ಎದುರಿಗೆ ತೊಟ್ಟಿಲುಗಳನ್ನು ಸ್ಥಾಪಿಸುವಂತೆ ಎಲ್ಲ ಆಸ್ಪತ್ರೆಗಳು ಮತ್ತು ಅನಾಥ್ರಾಮಗಳಿಗೆ ಈ ವರ್ಷದ ಆರಂಭದಲ್ಲಿ ಸರಕಾರವು ಆದೇಶಿಸಿತ್ತು.
ಕೆಲವು ರಾಜ್ಯಗಳು ಇಗಾಗಲೇ ಇಂತಹ ಯೋಜನೆಗಳನ್ನು ಜಾರಿಗೊಳಿಸಿವೆ.
ರಾಜಸ್ಥಾನ ಸರಕಾರವು 2015ರಲ್ಲಿ ಜಾರಿಗೆ ತಂದಿರುವ ‘ಆಶ್ರಯ ಪಾಲ್ನಾ ಸ್ಥಳ ಯೋಜನಾ’ದಡಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳಲ್ಲಿ 65 ತೊಟ್ಟಿಲುಗಳನ್ನು ಸ್ಥಾಪಿಸಲಾಗಿದೆ. ನವಜಾತ ಹೆಣ್ಣುಮಕ್ಕಳಿಗಾಗಿ ತಮಿಳುನಾಡು 1992ರಲ್ಲಿಯೇ ಯೋಜನೆಯೊಂದನ್ನು ಜಾರಿಗೊಳಿಸಿತ್ತು.





