ಅಮೆರಿಕ, ಭಾರತದಲ್ಲಿ ಬಡವರ, ಅಲ್ಪಸಂಖ್ಯಾತರ ವಿರುದ್ಧದ ಸರಕಾರಗಳಿವೆ: ಮಾರ್ಟಿನ್ ಲೂಥರ್ ಕಿಂಗ್-3
ಡಾ. ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನ

ಬೆಂಗಳೂರು, ಜು.21: ಅಮೆರಿಕ ಹಾಗೂ ಭಾರತದಲ್ಲಿ ಬಡವರ ಕುರಿತು ಕಾಳಜಿಯಿಲ್ಲದ, ಮಾಧ್ಯಮ ಸ್ವಾತಂತ್ರ ಒಪ್ಪದ, ಅಲ್ಪಸಂಖ್ಯಾತರ ಕುರಿತು ಒಲವಿಲ್ಲದ ಸರಕಾರಗಳಿವೆ ಎಂದು ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ವಿರುದ್ಧ ಅಮೆರಿಕದ ಸಾಮಾಜಿಕ ಕಾರ್ಯಕರ್ತ ಮಾರ್ಟಿನ್ ಲೂಥರ್ ಕಿಂಗ್-3 ನೇರ ವಾಗ್ದಾಳಿ ನಡೆಸಿದರು.
ಶುಕ್ರವಾರ ರಾಜ್ಯ ಸರಕಾರದ ವತಿಯಿಂದ ಜಿಕೆವಿಕೆ ಆವರಣದಲ್ಲಿ ಆಯೋಜಿಸಲಾಗಿರುವ ಡಾ. ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಮೂರು ದಿನಗಳ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮೆರಿಕದ ಸಾಮಾಜಿಕ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಮೊಮ್ಮಗನೂ ಆಗಿರುವ ಕಿಂಗ್-3, ಪ್ರಾರಂಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಹಾಗೂ ಅಂಬೇಡ್ಕರ್ ನಡುವಿನ ಸಾಮ್ಯತೆ ವಿವರಿಸಿದರು. ಅಮೆರಿಕದಲ್ಲಿರುವಂತೆಯೇ ಭಾರತದಲ್ಲಿ ಅಸಮಾನತೆಯಿದೆ. ಇಬ್ಬರೂ ವಿದ್ವಾಂಸರು. ಆದರೂ ಶ್ರೀಮಂತರ ನಡುವೆ ಉಳಿಯದೆ ಬಡವರ ಕಡೆ ಹೊರಳಿದರು. ಸಂಸತ್ ಭವನದ ಎದುರು ಇರುವ ಅಂಬೇಡ್ಕರ್ ಪ್ರತಿಮೆ ನೋಡಿದರೆ ಅಮೆರಿಕದಲ್ಲಿರುವ ಕಿಂಗ್ ಸ್ಮಾರಕ ನೆನಪಾಗುತ್ತದೆ. ನಮ್ಮ ಸಂಘರ್ಷ ಅಷ್ಟು ಸುಲಭದ್ದಲ್ಲ. ಮಾನವೀಯತೆ ಪುನಃಸ್ಥಾಪನೆ ಮಾಡಲು ಸಂಘರ್ಷ ಅನಿವಾರ್ಯ.
ಅಮೆರಿಕ ಹಾಗೂ ಭಾರತದಲ್ಲಿ ಒಂದೇ ರೀತಿಯ ಸರಕಾರಗಳಿವೆ. ಬಡವರನ್ನು ಕಂಡರೆ ತಿರಸ್ಕಾರ, ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ, ಅಲ್ಪಸಂಖ್ಯಾತರಿಗೆ ಹಿಂಸೆ ನೀಡಲಾಗುತ್ತಿದೆ. ಇಲ್ಲಿ ಹಿಂದು ತೀವ್ರವಾದಿಗಳಿರುವಂತೆ ಅಮೆರಿಕದಲ್ಲೂ ಮೂಲಭೂತವಾದಿಗಳು ಸಂವಿಧಾನದ ಎಲ್ಲ ಹಂತದ ಹುದ್ದೆ ಅಲಂಕರಿಸಿದ್ದಾರೆ. ಗೋರಕ್ಷಣೆ ಹೆಸರಲ್ಲಿ ದಲಿತರ ಹತ್ಯೆ ನಡೆಯುತ್ತಿದೆ. ದಲಿತರ ಜೀವಕ್ಕೂ ಬೆಲೆಯಿದೆ ಎಂದ ಕಿಂಗ್-3, ಹುಲಿಯೊಂದು ಕೊಂದಿದ್ದ ಹಸುವಿನ ಮಾಂಸ ತಿನ್ನುತ್ತಿದ್ದ ದಲಿತರನ್ನೂ ಹತ್ಯೆ ಮಾಡಲಾಗುತ್ತಿದೆ. ದಲಿತ ಯುವಕರು ಹೋರಾಟ ನಡೆಸುತ್ತಿದ್ದರೂ ಸಮಾನತೆ ಸಾಧ್ಯವಾಗಿಲ್ಲ ಎಂದು ತಿಳಿಸಿದರು. ಎಲ್ಲರೂ ಒಟ್ಟುಗೂಡಬೇಕು. ಅದರಿಂದ ಮಾತ್ರವೇ ಸಮಾನತೆ, ಶಾಂತಿ ಮೂಡಲು ಸಾಧ್ಯ ಎಂಬ ಸಂದೇಶ ನೀಡುವ ವಿ ವಿಲ್ ಓವರ್ಕಮ್ ಗೀತೆಯನ್ನು ನಿರೂಪಕಿ ನಂದಿತಾ ದಾಸ್ ಜತೆ ಹಾಡುತ್ತ ತಮ್ಮ ಮಾತು ಮುಗಿಸಿದರು.
ಕಿಂಗ್-3 ಅವರು ಕೇಂದ್ರ ಸರಕಾರದ ಕುರಿತು ಆಡಿದ ಮಾತನ್ನು ಡಾ.ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಸಂಪೂರ್ಣವಾಗಿ ಸಮರ್ಥಿಸಿದರು. ಸಾಮಾಜಿಕ ಸಮಾನತೆಯನ್ನು ಪುನಃ ಪಡೆಯುವ ಅಗತ್ಯವಿದೆ. ಕಳೆದ ಮೂರು ವರ್ಷದಲ್ಲಿ ಸಾಕಷ್ಟು ಸಮಾನತೆಯ ಅಂಶಗಳನ್ನು ಕಳೆದುಕೊಂಡಿದ್ದೇವೆ. ಸಮಾನತೆಯ ಹೋರಾಟವನ್ನು ಹತ್ತಕ್ಕುವ ಕಾರ್ಯ ನಡೆಯುತ್ತಿದೆ. ರಾಜಕೀಯ ಹಾಗೂ ಚಿಂತಕ ವರ್ಗ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಸಾಮಾಜಿಕ ಸಮಾನತೆಯನ್ನು ಬೆಂಬಲಿಸದ ಪುರಾತನ ಕೃತಿಗಳನ್ನು ತಿರಸ್ಕರಿಸಬೇಕು. ಇಂತಹ ಗಟ್ಟಿ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ. ವಿಭಜಿತ ಸಮಾಜವಾದ ಭಾರತದಲ್ಲಿ ಎಲ್ಲರಲ್ಲೂ ಸಮಾನ ಅಂಶ ಪರಿಗಣಿಸಬೇಕು. ಸಮಾನತೆಯ ಸಮಾಜ ನಿರ್ಮಿಸಲು ಮುಂದಾಗುವುದೊಂದೆ ಅಂಬೇಡ್ಕರ್ ವಿಚಾರಕ್ಕೆ ನೀಡುವ ಮನ್ನಣೆ ಎಂದರು.
ನೊಬೆಲ್ ಪುರಸ್ಕೃತ ಸಾಮಾಜಿಕ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಮಾತನಾಡಿ, ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಸೇರಿ ಇಬ್ಬರು ದಲಿತರನ್ನೆ ಕಣಕ್ಕೆ ಇಳಿಸಿದ್ದು ಅಂಬೇಡ್ಕರ್ ಚಿಂತನೆಗೆ ದೊರಕಿದ ಜಯ ಎಂದರು. ಇಷ್ಟೆಲ್ಲಾ ಬದಲಾವಣೆ ನಡುವೆಯೂ ಭಾರತದಲ್ಲಿ ಅನೇಕರಿಗೆ ದೇವಸ್ಥಾನ ಪ್ರವೇಶವಿಲ್ಲ, ಗಣಿಯಲ್ಲಿ ಕೆಲಸ ಮಾಡುವವರಿಗೆ ಭದ್ರತೆಯಿಲ್ಲ. ಸಂವಿಧಾನದತ್ತವಾಗಿ ದೊರಕಿರುವ ಅಸ್ಪೃಶ್ಯತೆ ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರುದ್ದ ನಿಲುವು ಇನ್ನೂ ಮರೀಚಿಕೆ ಆಗಿದೆ. ಕೇವಲ 8 ಜನರ ಬಳಿ ಶೇ.50ರಷ್ಟು ವಿಶ್ವದ ಸಂಪನ್ಮೂಲ ಕ್ರೋಡೀಕರಣವಾಗಿದೆ. ಶಿಕ್ಷಣ, ಪ್ರತಿಭಟನೆ ಹಾಗೂ ಸಂಘರ್ಷದಿಂದ ಮಾತ್ರವೇ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಕರೆ ನೀಡಿದರು.
ಮೋದಿ ಸಂಪೂರ್ಣ ಬೆತ್ತಲಾಗಿದ್ದಾರೆ: ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೇರ ವಾಗ್ದಾಳಿ ನಡೆಸಿದರು. ರೋಹಿತ್ ವೇಮುಲ ಆತ್ಮಹತ್ಯೆ ಅಲ್ಲ, ಕೊಲೆ. ಫ್ರಿಜ್ನಲ್ಲಿ ಗೋಮಾಂಸ ಇಟ್ಟುಕೊಂಡಿದ್ದ ಎಂದು ಅಖ್ಲಾಕ್ ಎಂಬ ಮುಸ್ಲಿಮನನ್ನು ಹತ್ಯೆ ಮಾಡಲಾಯಿತು. ಮೋದಿ ಇದ್ದಕ್ಕಿಂದ್ದಂತೆ ನೋಟು ರದ್ದಿಯಾಗಿದೆ ಎನ್ನುತ್ತಾರೆ. ಇದೊಂದು ಅಮಾನವೀಯ ಕೃತ್ಯ ಎಂದು ಅನೇಕರು ಖಾಸಗಿಯಾಗಿ ಹೇಳುತ್ತಾರಾದರೂ ಬಹಿರಂಗವಾಗಿ ಮೋದಿಯನ್ನು ಹೊಗಳುತ್ತಾರೆ. ಮೋದಿ ತಂತ್ರ ಬಹಿರಂಗವಾಗಿದೆ, ಮೋದಿ ಬೆತ್ತಲಾಗಿದ್ದಾರೆ. ಆದರೆ ಅವರ ಸುತ್ತ ಇರುವವರಿಗೆ ಇದನ್ನು ಹೇಳಲು ಧೈರ್ಯವಿಲ್ಲ. ಅಂಬೇಡ್ಕರ್ ನೀಡಿದ ಸಂವಿಧಾನವನ್ನು ನಮ್ಮಿಂದ ಕಸಿಯಲು ಆರೆಸೆಸ್ ಹಾಗೂ ಬಿಜೆಪಿ ಪ್ರಯತ್ನಿಸುತ್ತಿವೆ. ಭಾರತದ ಹಾಗೂ ಅಂಬೇಡ್ಕರ್ ವಿಚಾರಗಳನ್ನು ಈ ಜನರಿಗೆ ಅರ್ಥೈಸಬೇಕಿದೆ ಎಂದರು.







