ಆಗಸ್ಟ್‌ನಲ್ಲಿ ಮೋಡ ಬಿತ್ತನೆ: ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಜು.21: ರಾಜ್ಯದಲ್ಲಿ ತೀವ್ರ ಸ್ವರೂಪದ ಬರ ಹಾಗೂ ಮಳೆ ಕೊರತೆ ಹಿನ್ನೆಲೆಯಲ್ಲಿ ಆಗಸ್ಟ್ ಮೊದಲ ವಾರದಿಂದ ಎರಡು ತಿಂಗಳ ಕಾಲ ಮೋಡ ಬಿತ್ತನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸತತ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಸಾಧಕ- ಬಾಧಕಗಳನ್ನು ಚರ್ಚಿಸಿ ರಾಜ್ಯ ಸರಕಾರ ಮೋಡ ಬಿತ್ತನೆಗೆ ಮುಂದಾಗಿದೆ ಎಂದು ಹೇಳಿದರು.
ಟೆಂಡರ್ ಪ್ರಕ್ರಿಯೆ ಪೂರ್ಣ: ಮೋಡ ಬಿತ್ತನೆಗೆ ಈಗಾಗಲೇ 30 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಅಂತ್ಯಗೊಂಡಿದ್ದು, ಮೂರು ರಾಡಾರ್, ಎರಡು ವಿಮಾನ ಬಳಕೆ ಮಾಡಲಾಗುತ್ತಿದ್ದು, ಬೆಂಗಳೂರು, ಸುರಪುರ ಹಾಗೂ ಗದಗನಲ್ಲಿ ರಾಡಾರ್ ಸ್ಥಾಪನೆ ಮಾಡಲಾಗುತ್ತಿದ್ದು, ಆಗಸ್ಟ್ ಮೊದಲ ವಾರದಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದರು.
ರಾಡಾರ್ ತರಿಸುವ ಸಾಮರ್ಥ್ಯ ಹೊಂದಿರುವ ಹೊಯ್ಸಳ ಕಂಪೆನಿಗೆ ಟೆಂಡರ್ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣವಾಗಿದೆ. ಜಗತ್ತು ಈ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಜನರ ಅಗತ್ಯಕ್ಕೆ ತಕ್ಕಂತೆ ರಾಜ್ಯ ಸರಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಮೋಡ ಬಿತ್ತನೆಗೆ ಅನುಮತಿ ನೀಡುವಂತೆ ಕೇಂದ್ರ ಗೃಹ ಇಲಾಖೆಗೆ ಮನವಿ ಮಾಡಿದ್ದು, ಬೆಂಗಳೂರು ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸಲಾಗುವುದು. 300 ಗಂಟೆಗಳ ಕಾಲ ಮೋಡ ಬಿತ್ತನೆ ನಡೆಸಲಾಗುವುದು ಎಂದು ಹೇಳಿದರು.
ಮಳೆ ಬಿದ್ದರೂ, ಅಗತ್ಯವಿರುವ ಪ್ರದೇಶಗಳಲ್ಲಿ ಮೋಡ ಬಿತ್ತನೆ ನಡೆಸಲಾಗುವುದು. ಮೋಡ ಬಿತ್ತನೆ ಮಾಡಿದ ಅರ್ಧ ಗಂಟೆಯಲ್ಲಿ ಮಳೆ ಬರುತ್ತದೆ. ಮಳೆ ಬರದೆ ಹೋದರೆ ಆ ಸಂದರ್ಭದಲ್ಲಿ ಈ ಬಗ್ಗೆ ಆಲೋಚಿಸಬೇಕು ಎಂದ ಅವರು, ಎಷ್ಟು ರಾಕೆಟ್‌ಗಳು ಹಾರದೆ ವಿಫಲವಾಗಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆಯ ವೈಜ್ಞಾನಿಕ ಪ್ರಯತ್ನವನ್ನು ರಾಜ್ಯ ಸರಕಾರ ಮಾಡದೇ ಬೇರೆ ಯಾರು ಮಾಡುತ್ತಾರೆ ಎಂದ ಅವರು, ಈಗಾಗಲೇ 60ಕ್ಕೂ ಹೆಚ್ಚು ರಾಷ್ಟ್ರಗಳು ಈ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿವೆ ಎಂದು ಸ್ಪಷ್ಟಪಡಿಸಿದರು.
ಉಪವಾಸ ಕೈಬಿಡಿ: ಕಳಸಾ-ಬಂಡೂರಿ ಯೋಜನೆ ವಿಚಾರದಲ್ಲಿ ರಾಜ್ಯ ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಹೋರಾಟಗಾರರು ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಕೈಬಿಡಬೇಕೆಂದು ಎಚ್.ಕೆ.ಪಾಟೀಲ್ ಇದೇ ವೇಳೆ ಮನವಿ ಮಾಡಿದರು.
ಕಳಸಾ-ಬಂಡೂರಿ(ಮಹದಾಯಿ) ವಿಚಾರದಲ್ಲಿ ನ್ಯಾಯಾಧಿಕರಣದ ಹೊರಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವುದೇ ಸದ್ಯಕ್ಕಿರುವ ಪರಿಹಾರ. 200ಟಿಎಂಸಿ ನೀರು ಸಮುದ್ರ ಸೇರುತ್ತಿದೆ. ಈ ನೀರನ್ನು ಕುಡಿಯಲು ಬಳಸುವ ರಾಜ್ಯದ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದರು.







