ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕಾದ ಅಗತ್ಯ ಇಂದಿನ ತುರ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ
ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರಿಯ ಸಮಾವೇಶ

ಬೆಂಗಳೂರು, ಜು.21: ಸ್ವತಂತ್ರ ಭಾರತದ ಇತಿಹಾಸದಲ್ಲಿ ಈ ರೀತಿಯ ಧಾರ್ಮಿಕ ಅಸಹಿಷ್ಣುತೆ, ದ್ವೇಷದ ವಾತಾವರಣವನ್ನು ಎಂದಿಗೂ ನೋಡಿರಲಿಲ್ಲ. ಅಂಬೇಡ್ಕರ್ ಅವರ ಕಲ್ಪನೆಯ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕಾದ ಅಗತ್ಯವಿದೆ. ಅವರ ಚಿಂತನೆಗಳ ಪರಿಣಾಮವಾಗಿ 20ನೆ ಶತಮಾನದ ದಲಿತ ಹೋರಾಟಕ್ಕೆ ಜೀವ ತುಂಬಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ನಗರದ ಜಿಕೆವಿಕೆ ಆವರಣದಲ್ಲಿ ರಾಜ್ಯ ಸರಕಾರ ಆಯೋಜಿಸಿರುವ ಮೂರು ದಿನಗಳ ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರಿಯ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶವು ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅಂಬೇಡ್ಕರ್ ವಿಚಾರಧಾರೆಯಡಿಯಲ್ಲಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಬಹುಸಂಸ್ಕತಿಯ ಸಮಾಜವು ಕಷ್ಟದ ಹಾದಿಯಲ್ಲಿದೆ. ನಾಗರಿಕತೆ ಹಾಗೂ ಸಂಸ್ಕತಿಯು ಸಂಕಷ್ಟದ ಪರೀಕ್ಷೆಯನ್ನು ಎದುರಿಸುತ್ತಿದೆ. ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಬುದ್ಧಿಜೀವಿಗಳು, ವಿಚಾರವಾದಿಗಳು ವ್ಯಕ್ತಪಡಿಸುವ ಅಭಿಪ್ರಾಯಗಳು, ಮುಂದಿನ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಗಲಿವೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕವು ಶತಮಾನಗಳಿಂದ ಸಾಮಾಜಿಕ ನ್ಯಾಯದ ಕಲ್ಪನೆಯ ಪರವಾಗಿದೆ. 12ನೆ ಶತಮಾನದಲ್ಲಿಯೆ ಬಸವಣ್ಣ ಸಾಮಾಜಿಕ ಸುಧಾರಣೆಯ ಕ್ರಾಂತಿಯನ್ನು ಮೊಳಗಿಸಿದ್ದರು. ವಚನಕಾರರು, ಸೂಫಿಗಳು, ತತ್ವಪದಕಾರರು ಬಲಿಷ್ಟ ಅಡಿಪಾಯವನ್ನು ಈ ನೆಲದಲ್ಲಿ ಹಾಕಿದ್ದಾರೆ. ಕರ್ನಾಟಕದಲ್ಲಿಯೂ ದಲಿತರ ಪರವಾದ ಹೋರಾಟಗಳು ಯಶಸ್ಸು ಕಂಡಿವೆ. ಸಮಾನತೆ, ಸ್ವಾತಂತ್ರ್ಯ, ಸಹೋದರತೆಯ ಭಾವನೆ ಮಾತ್ರ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರನ್ನು ಒಂದುಗೂಡಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಹೇಳಿದರು.
ನನ್ನ ರಾಜಕೀಯ ಜೀವನವನ್ನು ಅಂಬೇಡ್ಕರ್, ಬಸವಣ್ಣ ಹಾಗೂ ಮಹಾತ್ಮಗಾಂಧಿಯ ಅಂತ್ಯೋದಯದ ಕಲ್ಪನೆಗೆ ಪೂರಕವಾಗಿ ನಡೆಸುತ್ತಿದ್ದೇನೆ. ಹಣಕಾಸು ಸಚಿವ, ಮುಖ್ಯಮಂತ್ರಿಯಾಗಿ ನಾನು ಮಂಡಿಸಿದ ಬಜೆಟ್‌ಗಳಲ್ಲಿ ನನ್ನ ಗ್ರಾಮದ ಅತ್ಯಂತ ಕಡುಬಡ ರೈತ ತನ್ನ ಮಗಳಿಗಾಗಿ ಒಂದು ಬಟ್ಟಲು ಅಕ್ಕಿಯಾಚಿಸುತ್ತಿರುವ ದೃಶ್ಯವನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ ಎಂದು ಅವರು ಹೇಳಿದರು.
ಕಳೆದ ನಾಲ್ಕು ವರ್ಷಗಳಲ್ಲಿ ನಮ್ಮ ಸರಕಾರವು ದಲಿತರ ಕಲ್ಯಾಣಕ್ಕೆ ಶ್ರಮಿಸಿದೆ. ಬಜೆಟ್‌ನಲ್ಲಿ ಶೇ.24.1ರಷ್ಟು ಅನುದಾನ ಒದಗಿಸುವ ಕ್ರಾಂತಿಕಾರಕ ಕಾಯ್ದೆ ಅನಷ್ಠಾನಗೊಳಿಸಿದೆ. ಜೊತೆಗೆ, ಹಿಂದುಳಿದ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಶ್ರಮಿಸಿದ್ದೇವೆ. ರೈತರ ಕಲ್ಯಾಣಕ್ಕೆ ಆದ್ಯತೆ ನೀಡಿದ್ದೇವೆ. ನಮಗೆ ಕರ್ನಾಟಕ ಮಾದರಿಯ ಅಗತ್ಯವಿದೆ. ಬೇರೆಯವರ ಅಗತ್ಯವಿಲ್ಲ ಎಂದರು.
ಸಿಎಂ ಭಾಷಣಕ್ಕೆ ಅಡ್ಡಿಪಡಿಸಲು ಯತ್ನ
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಲು ಆಗಮಿಸುತ್ತಿದ್ದಂತೆ ಸಭಿಕರ ಮಧ್ಯೆದಲ್ಲಿ ಇದ್ದ ವ್ಯಕ್ತಿಯೊಬ್ಬ ಬೇಕೇ ಬೇಕು ನ್ಯಾಯಬೇಕು, ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು, ಅಂಬೇಡ್ಕರ್‌ಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿಕೊಂಡು ವೇದಿಕೆ ಮೇಲೆ ಹತ್ತಲು ಪ್ರಯತ್ನಿಸಿದ. ಕೂಡಲೇ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಸಭಾಂಗಣದಿಂದ ಹೊರಗೆ ಕರೆದುಕೊಂಡು ಹೋದರು.







