ಇಂಟರ್‌ನೆಟ್ ಕಾಲದಲ್ಲಿ ಖಾಸಗಿತನದ ವ್ಯಾಖ್ಯಾನ ಕಷ್ಟ: ಸುಪ್ರೀಂ
ಆಧಾರ್ ಯೋಜನೆ ಪ್ರಕರಣ

ಹೊಸದಿಲ್ಲಿ, ಜು. 21: ಐಫೋನ್ ಹಾಗೂ ಐಪ್ಯಾಡ್ ಬಳಸುವವರು ಬೆರಳಚ್ಚು ಬಳಸಿ ಮೊಬೈಲ್ ತೆರೆಯುತ್ತಾರೆ ಹಾಗೂ ಸೇವೆದಾರ ಸಂಸ್ಥೆಗಳಿಗೆ ತಮ್ಮ ಮಾಹಿತಿಗಳನ್ನು ಶೇಖರಿಸಿಡಲು ಅವಕಾಶ ನೀಡುತ್ತಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ವಿಚಾರಗಳನ್ನು ಪೋಸ್ಟ್ ಮಾಡುತ್ತಾರೆ ಎಂಬುದನ್ನು ಉದಾಹರಿಸಿರುವ ಸುಪ್ರೀಂ ಕೋರ್ಟ್, ಇದು ಖಾಸಗೀತನಕ್ಕೆ ಬರುತ್ತದೆ ಎಂದು ರೇಖೆ ಎಳೆಯಲು ಕಷ್ಟ. ಇದು ನ್ಯಾಯಾಲಯಕ್ಕೆ ಸವಾಲಿನ ವಿಚಾರ ಎಂದಿದೆ.
ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರು ಹಾಗೂ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಯಾವುದೇ ನಿರ್ಬಂಧವಿಲ್ಲದ ವಿಷಯಗಳು ಹಂಚಿಕೆಯಾಗುತ್ತಿವೆ. ಇದನ್ನು ಗಮನದಲ್ಲಿರಿಸಿಕೊಂಡು ಖಾಸಗೀತನದ ಹಕ್ಕನ್ನು ಪರಿಶೀಲಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆಧಾರ್ ಯೋಜನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಖಾಸಗಿತನದ ಹಕ್ಕಿನ ಸಿಂಧುತ್ವವನನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಐದು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ವಿಸ್ತೃತ ಪೀಠ 1950ರಲ್ಲಿ ಹಾಗೂ 1962ರಲ್ಲಿ ತೀರ್ಪು ನೀಡಿತ್ತು. ಆಗ ಖಾಸಗೀತನದ ಹಕ್ಕು ಮೂಲಭೂತ ಹಕ್ಕು ಅಲ್ಲ ಎಂದು ಹೇಳಿತ್ತು.
ಜೂನ್ 17ರಂದು 9 ನ್ಯಾಯಾಧೀಶರಿದ್ದ ಪೀಠ ಖಾಸಗೀತನದ ಹಕ್ಕಿನ ಕೆಲವು ವಿಚಾರಗಳ ಬಗ್ಗೆ ಹಾಗೂ ಈ ಹಿಂದಿನ ಎರಡು ತೀರ್ಪು ಸರಿಯಾಗಿದೆಯೇ ಎಂದು ಪರಿಶೀಲಿಸಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಹವ್ಯಾಸಗಳ ಕುರಿತ ವಿವರಣೆ, ಕ್ರೆಡಿಟ್ ಕಾರ್ಡ್ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಸಂದೇಶಗಳ ರವಾನೆಯಿಂದ ಖಾಸಗೀತನದ ಉಲ್ಲಂಘನೆ ಹಾಗೂ ಅದರ ಅಪಾಯವನ್ನು ಹಿರಿಯ ನ್ಯಾಯವಾದಿ ಸಜ್ಜನ್ ಪೂವಯ್ಯ ಸುಪ್ರೀಂ ಕೋರ್ಟ್‌ನ ಮುಂದಿರಿಸಿದ್ದಾರೆ. ಇದೆಲ್ಲವೂ ಖಾಸಗೀತನವನ್ನು ಉಲ್ಲಂಘಿಸುವುದಿಲ್ಲವೇ ಎಂದು ಅವರು ನ್ಯಾಯಾಲಯವನ್ನು ಪ್ರಶ್ನಿಸಿದ್ದಾರೆ.







