ಜು. 23: ಪ್ರಧಾನ ಮಂತ್ರಿ ಉಜ್ವಲ ಯೋಜನೆ-ಫಲಾನುಭವಿಗಳ ಸಮಾವೇಶ: ನಳಿನ್ ಕುಮಾರ್ ಕಟೀಲ್
ಮಂಗಳೂರು.ಜು.21:ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಬಗ್ಗೆ ಫಲಾನುಭವಿಗಳಿಗೆ ಹಾಗೂ ಹೊಸ ಅರ್ಜಿದಾರರಿಗೆ ಮಾಹಿತಿ ನೀಡಲು ಜು.22ರಂದು ಬಂಟ್ವಾಳ ಬಂಟರ ಭವನ ಸಭಾ ಭವನದಲ್ಲಿ ಮಾಹಿತಿ ನೀಡುವ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಾರ್ಯಕ್ರಮ ಬೆಳಗ್ಗೆ 11ಗಂಟೆಗೆ ಆರಂಭವಾಗಲಿದೆ ಜಿಲ್ಲೆಯ 42 ಗ್ಯಾಸ್ ವಿತರಕರು ,ಸುಮಾರು 2500ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಈ ಸಂದರ್ಭದಲ್ಲಿ ನೂತನ ಅರ್ಜಿ ದಾರರಿಂದ ಸ್ಥಳದಲ್ಲಿಯೇ ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸುವ ಬಳಕೆದಾರರಿಗೆ ಎಲ್‌ಪಿಜಿ ಗ್ಯಾಸ್ ಸಂಪರ್ಕ,ಗ್ಯಾಸ್ ಸಿಲಿಂಡರ್ ಜೊತೆ ಗ್ಯಾಸ್ ಸ್ಟೌವನ್ನು ಉಚಿತವಾಗಿ ನೀಡಲಾಗುವುದು.ದೇಶದಲ್ಲಿ ಸುಮಾರು 5 ಕೋಟಿ ಜನರಿಗೆ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ದೇಶದಲ್ಲಿ 2.5 ಕೋಟಿ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.
ಆಗಸ್ಟ್ 15ರಿಂದ ‘ ಉಜ್ವಲ್ +’ಯೋಜನೆ :- ಆಗಸ್ಟ್ 15ರಿಂದ ದೇಶದಲ್ಲಿ ಇನ್ನಷ್ಟು ಜನರಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ‘ ಉಜ್ವಲ್ +’ಯೋಜನೆ ಜಾರಿಗೊಳ್ಳಲಿದೆ.
ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಉರುವಲು ಬಳಸಿ ಹೊಗೆಯುಗುಳುವ ಒಲೆಗಳಿಂದ ಮುಕ್ತರನ್ನಾಗಿ ಮಾಡಬೇಕು.ಪರಿಸರ ಮಾಲಿನ್ಯ ತಡೆಯಲು ಮತ್ತು ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಠಿಯಿಂದ ದೃಷ್ಟಿಯಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಬಡವರಿಗೂ ಉಚಿತ ಎಲ್‌ಪಿಜಿ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಈ ಹಿಂದೆ ಎಲ್‌ಪಿಜಿ ಸಂಪರ್ಕಕ್ಕಾಗಿ ತಿಂಗಳು ಗಟ್ಟಲೆ ಕಾಯಬೇಕಾಗಿತ್ತು.ಪ್ರಸಕ್ತ ಗ್ರಾಮೀಣ ಪ್ರದೇಶದ ಜನರಿಗೆ ಈ ಯೋಜನೆ ವರದಾನವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ದ.ಕ ಜಿಲ್ಲೆಯಲ್ಲಿ 40 ಸಾವಿರ ಅರ್ಜಿದಾರರು:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2011ರಿಂದ ಎಲ್‌ಪಿಜಿ ಸಂಪರ್ಕಕ್ಕಾಗಿ 44ಸಾವಿರ ಜನರು ಅರ್ಜಿಸಲ್ಲಿಸಿದ್ದಾರೆ. ಮುಂದಿನ ಹಂತದಲ್ಲಿ 2011ರಿಂದ 2016ರವರೆಗೆ ಅರ್ಜಿಸಲ್ಲಿಸದೇ ಇರುವ ಅರ್ಹರು ನೂತನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.







