ಎಎಸ್‌ಐ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನ
ಮಂಗಳೂರು, ಜು. 21: ನಗರದ ಉರ್ವ ಪೊಲೀಸ್ ಠಾಣೆಯ ಎಎಸ್‌ಐ ಐತಪ್ಪರ ಕೊಲೆ ಯತ್ನ ಪ್ರಕರಣದ ನೆನಪು ಮಾಸುವ ಮುನ್ನವೇ ಪಣಂಬೂರು ಪೊಲೀಸ್ ಠಾಣೆಯ ಎಎಸ್‌ಐ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಲಾಗಿದೆ.
ಪಣಂಬೂರು ಪೊಲೀಸ್ ಠಾಣೆಯ ಎಎಸ್‌ಐ ಪುರಂದರ ಗೌಡ (50) ಅವರು ಕೊಲೆ ಯತ್ನಕ್ಕೆ ಒಳಗಾದವರು.
ನಗರದ ಹೊರವಲಯದ ಬೆಂಗ್ರೆಯಲ್ಲಿ ಘಟನೆ ನಡೆದಿದ್ದು, ಚಂದು ಹಾರಿಸ್ ತಂಡ ಎಎಸ್‌ಐ ಅವರ ಮೇಲೆ ಕಾರು ಚಲಾಯಿಸಿ ಕೊಲೆಗೆ ಯತ್ನಿಸಿದೆ. ಪರಿಣಾಮ ಕೈ ಹಾಗೂ ಕಾಲಿಗೆ ಗಾಯವಾಗಿದೆ. ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾರಿಸ್ ದರೋಡೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಲು ಬುಧವಾರ ಅಪರಾಧ ವಿಭಾಗದ ಎಸ್‌ಐ ಕುಮಾರೇಶನ್ ಜತೆ ಹೋಗಿದ್ದಾಗ ಘಟನೆ ನಡೆದಿದೆ. ಪೊಲೀಸರು ಎರಡು ತಂಡಗಳಾಗಿ ಆರೋಪಿಯ ಬಂಧನಕ್ಕೆ ಹೋಗಿದ್ದರು. ಹಲವು ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿದ್ದು, ಪೊಲೀಸರನ್ನು ಕಂಡೊಡನೆ ತಪ್ಪಿಸಲು ಯತ್ನಿಸಿ ಎಎಸ್‌ಐ ಮೇಲೆಯೇ ಕಾರು ಚಲಾಯಿಸಲು ಯತ್ನಿಸಿದ್ದಾನೆ. ಈ ಸಂದರ್ಭ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ಈತನ ಸಹಚರ ಆದಿಲ್ ಜತೆ ಪರಾರಿಯಾಗಿದ್ದಾನೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.







