ಸಿಎ ಪರೀಕ್ಷೆಯಲ್ಲಿ ಶ್ರವಣ್ ರಾವ್ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ

ಮಂಗಳೂರು, ಜು. 21: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಮೇ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರು ದೇರೆಬೈಲ್ ಲ್ಯಾಂಡ್‌ಲಿಂಕ್ಸ್ ನಿವಾಸಿ ಶ್ರವಣ್ ರಾವ್ ಮೊದಲ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅವರು ಉದ್ಯಮಿ ರಘುರಾಮ ರಾವ್ ಹಾಗೂ ಅಂಚೆ ಇಲಾಖೆ ಉದ್ಯೋಗಿ ಆಶಾ ರಾವ್ ಅವರ ಪುತ್ರ. ಮಂಗಳೂರಿನ ಸಿ.ಎ. ಸಂಸ್ಥೆ ಶ್ರೀರಾಮುಲು ನಾಯ್ಡು ಆ್ಯಂಡ್ ಕಂಪೆಯಲ್ಲಿ ಶ್ರವಣ್ ರಾವ್ ಆರ್ಟಿಕಲ್‌ಶಿಪ್ ಅನ್ನು 2014ರಿಂದ 2017ರ ಅವಧಿಯಲ್ಲಿ ನಡೆಸಿದ್ದರು. 2015ರ ಜೂನ್‌ನಲ್ಲಿ ಕಂಪ ಸೆಕ್ರೇಟರಿ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 9ನೇ ರ್ಯಾಂಕ್ ಮಾತ್ರವಲ್ಲದೆ ದಕ್ಷಿಣ ಭಾರತ ಟಾಪರ್ ಆಗಿದ್ದರು. 2016ರ ಜೂನ್‌ನಲ್ಲಿ ಕಂಪ ಸೆಕ್ರೇಟರಿ ಫೈನಲ್‌ನಲ್ಲಿ ಅಖಿಲ ಭಾರತ ಮಟ್ಟದಲ್ಲಿ 16ನೇ ರ್ಯಾಂಕ್ ಪಡೆದಿದ್ದರು. ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಪಿಯುಸಿ ವರೆಗೆ ಅಧ್ಯಯನ ನಡೆಸಿದ ಶ್ರವಣ್ ರಾವ್, ಪಿಯುಸಿಯಲ್ಲಿ ಶೇ. 93 ಅಂಕ ಪಡೆದು ಬೆಸ್ಟ್ ಓಟ್ ಗೋಯಿಂಗ್ ಸ್ಟೂಡೆಂಟ್ ಪುರಸ್ಕಾರ ಪಡೆದಿದ್ದರು. ಕೆನರಾ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡಿದ್ದರು.
ಆರ್ಟಿಕಲ್‌ಶಿಪ್‌ನ ಅವಧಿಯಲ್ಲಿ ಹಿರಿಯರ ಮಾರ್ಗದರ್ಶನ, ಮನೆಯಲ್ಲಿ ಪೋಷಕರ ಬೆಂಬಲ, ಕಚೇರಿ ಅವಧಿಯ ಬಳಿಕ ನಿತ್ಯ ನಾಲ್ಕು ಗಂಟೆಗಳ ಅಧ್ಯಯನ ನಡೆಸಿದ ಪರಿಣಾಮ ಸಿಎಸ್ ಹಾಗೂ ಸಿಎಯಲ್ಲಿ ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ಶ್ರವಣ್ ರಾವ್.





