ಸೌಹಾರ್ದಕ್ಕೆ ಹುಳಿ ಹಿಂಡದಿರಿ
ಮಾನ್ಯರೆ,
ಕೆಲವೇ ಜನರಿಗೆ ಫಲಪ್ರದವಾಗಿರುವ ಸಂಕುಚಿತ ಚಿಂತನೆಗಳನ್ನು ಬಹುಜನರ ಮೇಲೆ ಹೇರುವುದು ಫ್ಯಾಶಿಸಂನ ಒಂದು ಅಂಗವಾಗಿದೆ. ನ್ಯಾಯ ಮತ್ತು ಮಾನವೀಯತೆಗೆ ಸದಾ ವ್ಯತಿರಿಕ್ತವಾದ ಇದರ ಧೋರಣೆಗಳು ಅಸಹಿಸ್ಣುತೆ ಮತ್ತು ಸುಳ್ಳು ವದಂತಿಗಳಿಗೆ ಜೀವತುಂಬುವುದನ್ನು ತನ್ನ ಮೂಲ ಮಂತ್ರವನ್ನಾಗಿಸಿದೆ. ಪರಧರ್ಮ ಸಹಿಸ್ಣುತೆಯಂತಹ ಉದಾತ್ತ ಪರಂಪರೆಗೆ ಫ್ಯಾಶಿಸ್ಟ್ ಚಿಂತನೆಗಳು ಬದ್ಧ ವಿರೋಧವಾಗಿವೆ. ಸ್ವಾಮಿ ವಿವೇಕಾನಂದ ಮತ್ತು ನಾರಾಯಣ ಗುರುಗಳಂತಹ ಮಹಾತ್ಮರ ನಡೆನುಡಿಗಳು ಫ್ಯಾಶಿಸಂಗೆ ತೀರಾ ಅಪಥ್ಯ ವಿಷಯಗಳಾಗಿವೆ.
ಇತ್ತೀಚೆಗೆ ದ.ಕ. ಜಿಲ್ಲೆಯ ಕೆಲವೆಡೆ ಇದರ ಒಂದು ಝಲಕ್ ಅನಾವರಣಗೊಂಡಿದ್ದು, ಕೆಲವು ಅಮೂಲ್ಯ ಜೀವಗಳು ಬಲಿಯಾಗಿವೆ. ಆದರೆ ಸರ್ವಜನರ ಪ್ರತಿನಿಧಿಗಳೆಂದು ಆರಿಸಿ ಬಂದವರು ಶಾಂತಿ ಕಾಪಾಡುವ ಹೇಳಿಕೆಗಳನ್ನು ನೀಡುವ ಬದಲು ಜಿಲ್ಲೆಯ ಅಹಿತಕರ ಘಟನೆಗಳ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಾಡುತ್ತಿರುವುದು ಖೇದಕರ.
ಇನ್ನಾದರೂ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮತ್ತು ಮಾಧ್ಯಮಗಳು ತಮ್ಮ ಜವಾಬ್ದಾರಿ ಮರೆಯದೆ ಜಿಲ್ಲೆಯ ಕೋಮು ಸೌಹಾರ್ದಕ್ಕೆ ಹುಳಿ ಹಿಂಡುವುದನ್ನು ನಿಲ್ಲಿಸಲಿ.





