ಅಪಾಯಕಾರಿ ವಿದ್ಯುತ್ ಕಂಬ ಬದಲಿಸಲು ಒತ್ತಾಯ

ಮೂಡಿಗೆರೆ, ಜು.22: ಪಟ್ಟಣದ ಜನ ನಿಬಿಡ ತತ್ಕೋಳ ರಸ್ತೆಯಲ್ಲಿ ಟ್ರಾನ್ಸ್‌ಫರ್ಮರ್ ಅಳವಡಿಸಿರುವ ವಿದ್ಯುತ್ ಕಂಬದಿಂದ ಅಪಾಯಕಾರಿಯಾಗಿದ್ದು, ತಕ್ಷಣ ಇದನ್ನು ಬದಲಿಸಿ ಆಗಬಹುದಾದ ಅಪಾಯವನ್ನು ತಪ್ಪಿಸಬೇಕು ಎಂದು ಹುಲ್ಲೆಮನೆ ರವಿ ಹೇಳಿಕೆಯಲ್ಲಿ ಶನಿವಾರ ತಿಳಿಸಿದ್ದಾರೆ.
ಜನನಿಬೀಡ ತತ್ಕೋಳ ರಸ್ತೆಯಲ್ಲಿ ಅಳವಡಿಸಿರುವ ವಿದ್ಯುತ್ ವಿತರಕ ಕಂಬದಲ್ಲಿ ಕೈಗೆಟುಕುವಂತೆ ತಂತಿ ಫ್ಯೂಸ್‌ಗಳನ್ನು ಜೋಡಿಸಲಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಪಾದಾಚಾರಿಗಳು ಮತ್ತು ವಾಹನಗಳು ತಿರುಗಾಡುತ್ತಲೇ ಇರುತ್ತದೆ. ಅಲ್ಲದೆ ಕಂಬದ ಎದುರಿನಲ್ಲಿಯೇ ಎಂಇಎಸ್ ಶಾಲೆಯಿದ್ದು, ಇಲ್ಲಿನ ಶಾಲಾ ಮಕ್ಕಳು ಸಂಜೆಯ ವೇಳೆಯಲ್ಲಿ ಕ್ರಿಕೆಟ್, ಬ್ಯಾಟ್‌ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡುತ್ತಿರುತ್ತಾರೆ. ಎಷ್ಟೋ ಬಾರಿ ಚೆಂಡು ಶಾಲಾ ಕಾಂಪೌಡ್ ದಾಟಿ ಈ ವಿದ್ಯುತ್ ಕಂಬದ ಬಳಿ ಬರುವುದರಿಂದ ವಿದ್ಯಾರ್ಥಿಗಳು ಕಂಬದ ಬಳಿಗೆ ಬರಲೇಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಅಳವಡಿಸಿರುವ ವಿದ್ಯುತ್ ಫ್ಯೂಸ್ ತಂತಿಗಳು ಕೈಗೆ ಎಟುಕುವುದರಿಂದ ಸಾವು ನೋವು ಸಂಭವಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಈ ರಸ್ತೆಯಲ್ಲಿ ಜಾನುವಾರುಗಳು ಕೂಡ ಹಿಂಡು ಹಿಂಡಾಗಿ ಮೇವು ತಿನ್ನಲು ಬರುತ್ತಿರುತ್ತವೆ. ಮೂಕ ಪ್ರಾಣಿಗಳಿಗೆ ವಿದ್ಯುತ್ ತಂತಿ ಬಗ್ಗೆ ತಿಳಿಯದೇ ವಿದ್ಯುತ್ ತಗುಲುವ ಸಾಧ್ಯತೆ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಕಂಬದಿಂದ ಸಾವು ನೋವು ಸಂಭವಿಸುವ ಮುನ್ನ ಮೆಸ್ಕಾಂ ಇಲಾಖೆ ಎಚ್ಚೆತ್ತುಕೊಂಡು ಸುತ್ತಲೂ ಜಾಲರಿ ಹಾಕಿಸಿ ಬಂದೋ ಬಸ್ತ್ ಮಾಡಬೇಕು. ಇಲ್ಲವೇ ಫ್ಯೂಸ್ ತಂತಿಗಳನ್ನು ಕೈಗೆಟುಕದಂತೆ ಮೇಲೆ ಅಳವಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸ್ಥಳೀಯರೊಂದಿಗೆ ಮೆಸ್ಕಾಂ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.







