ಅಪಾಯವನ್ನು ಆಹ್ವಾನಿಸುತ್ತಿರುವ ಗುಂಡಿ ಮುಚ್ಚಲು ಆಗ್ರಹ

ಮೂಡಿಗೆರೆ, ಜು.22: ಕಳೆದ ಕೆಲವು ದಿನಗಳಿಂದ ಸುರಿದ ಮಳೆಗೆ ಆಳವಾದ ಗುಂಡಿಯೊಂದು ಪಟ್ಟಣದ ಸಾರ್ವಜನಿಕ ಬಾಲಕರ ಪ್ರಿಮೆಟ್ರಿಕ್ ವಿದ್ಯಾರ್ಥಿ ನಿಲಯದ ಎದುರು ನಿರ್ಮಾಣವಾಗಿದ್ದು, ಅಪಾಯ ಸಂಭವಿಸುವ ಮುನ್ನ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗುಂಡಿಯನ್ನು ಮುಚ್ಚಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಪಟ್ಟಣದ ಸಾರ್ವಜನಿಕ ಬಾಲಕರ ಪ್ರಿಮೆಟ್ರಿಕ್ ವಿದ್ಯಾರ್ಥಿ ನಿಲಯದ ಎದುರು ಮಳೆ ನೀರು ಹರಿದು ಬೃಹತ್ ಗಾತ್ರದ ಗುಂಡಿ ಬಿದ್ದಿದೆ. ಹಾಸ್ಟೆಲ್‌ನ ವಿದ್ಯಾರ್ಥಿಗಳು, ಪಾದಾಚಾರಿಗಳು ಗುಂಡಿಯಲ್ಲಿ ಬೀಳುವ ಸಾಧ್ಯತೆಯಿದೆ. ಮಳೆ ಕಡಿಮೆಯಾಗಿದ್ದರಿಂದ ಜನರ ಕಣ್ಣಿಗೆ ಅದು ಕಾಣಿಸುತ್ತಿರುವುದರಿಂದ ಪಾದಾಚಾರಿಗಳು ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಆದರೆ ಮಳೆ ಬಂದಾಗ, ಮಳೆ ನೀರಿನಿಂದ ಗುಂಡಿ ತುಂಬಿಕೊಳ್ಳುವುದರಿಂದ ಗುಂಡಿ ಗೋಚರವಾಗುವುದಿಲ್ಲ. ಇದರೊಳಗೆ ಬಿದ್ದರೆ ಪಟ್ಟಣದ ಒಳ ಚರಂಡಿಯಲ್ಲಿ ಹರಿದು ಹೋಗುತ್ತಾರೆ. ಅಲ್ಲದೆ ಪಕ್ಕದಲ್ಲೇ ಇರುವ ಸಾರ್ವಜನಿಕ ಬಾಲಕರ ಪ್ರಿಮೆಟ್ರಿಕ್ ವಿದ್ಯಾರ್ಥಿ ನಿಲಯದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಈ ವಿದ್ಯಾರ್ಥಿಗಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಜವಾಬ್ದಾರಿ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಕಳೆದ 2 ದಿನಗಳ ಹಿಂದೆ ಇದೇ ಗುಂಡಿಯಲ್ಲಿ ಕಾರೊಂದು ಸಿಕ್ಕಿಬಿದ್ದಿತ್ತು. ಕಾರನ್ನು ಸಾರ್ವಜನಿಕರ ಸಹಾಯದಿಂದ ಮೇಲೆತ್ತಲಾಯಿತು. ಆದರೆ ಮಳೆ ಬರುವ ಸಮಯದಲ್ಲಿ ಈ ಗುಂಡಿಗೆ ಮನುಷ್ಯ ಬಿದ್ದರೆ ಕಾಪಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ ತಾತ್ಕಾಲಿಕವಾಗಿ ಕಲ್ಲು ಹಾಕಿ ಮುಚ್ಚಿಸಿದ್ದರು.
ಇದೀಗ ಮಳೆಯಿಂದ ಗುಂಡಿ ಅಗಲವಾಗಿ ಕಲ್ಲು ತಳ ಸೇರಿರುವ ಹಿನ್ನೆಲೆಯಲ್ಲಿ ಗುಂಡಿ ಆಳವಾಗಿದೆ. ಈ ತನಕ ಸಂಬಂಧಿಸಿದ ಅಧಿಕಾರಿಗಳು ಗಮನಿಸಿಲ್ಲ. ಪಕ್ಕದಲ್ಲಿರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಮುನ್ನ ಬಾಯ್ದೆರೆದು ಅಪಾಯವನ್ನು ಆಹ್ವಾನಿಸುತ್ತಿರುವ ಗುಂಡಿಯನ್ನು ಮುಚ್ಚುವಂತೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.







