ರಾಜ್ಯದಲ್ಲಿ ಅಧಿಕಾರಕ್ಕೇರಲು ಬಿಜೆಪಿ ವಾಮಮಾರ್ಗ: ಮುಹಮ್ಮದ್ ಉಬೇದುಲ್ಲಾ ಶರೀಫ್

ಬೆಂಗಳೂರು, ಜು.22: ದಕ್ಷಿಣ ಭಾರತದ ಹೆಬ್ಬಾಗಿಲು ಎಂದು ಪರಿಗಣಿಸಲ್ಪಟ್ಟಿರುವ ನಮ್ಮ ರಾಜ್ಯದಲ್ಲಿ ಅಧಿಕಾರಕ್ಕೇರಲು ಬಿಜೆಪಿ ವಾಮಮಾರ್ಗಗಳನ್ನು ಅನುಸರಿಸುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು, ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡ ಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಉಬೇದುಲ್ಲಾ ಶರೀಫ್ ಕರೆ ನೀಡಿದ್ದಾರೆ.
ಶನಿವಾರ ನಗರದ ಕಬ್ಬನ್‌ಪೇಟೆ ಮುಖ್ಯರಸ್ತೆಯಲ್ಲಿರುವ ಹಮೀದ್ ಷಾ ಕಾಂಪ್ಲೆಕ್ಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾತಿಯ ವಿಷಯ ಬೀಜ ಬಿತ್ತಿ, ಕೋಮುಭಾವನೆಗಳನ್ನು ಕೆರಳಿಸಿ, ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಜನಸಾಮಾನ್ಯರ ಬದುಕು ಕಷ್ಟಕ್ಕೆ ಸಿಲುಕಿದೆ. ಆದರೂ, ಸುಳ್ಳು ಪ್ರಚಾರಗಳನ್ನು ಮಾಡುವ ಮೂಲಕ ದೇಶದಲ್ಲಿ ಬದಲಾವಣೆಯ ಕ್ರಾಂತಿಯಾಗುತ್ತಿದೆ ಎಂದು ಬಿಂಬಿಸಲು ಯತ್ನಿಸಲಾಗುತ್ತಿದೆ ಎಂದು ಉಬೇದುಲ್ಲಾ ಶರೀಫ್ ಕಿಡಿಗಾರಿದರು.
ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಬಡ, ಮಧ್ಯಮ ವರ್ಗ ಆತಂಕಕ್ಕೆ ಸಿಲುಕಿದ್ದು, ಉದ್ಯಮಿಗಳು, ಬಂಡವಾಳಶಾಹಿಗಳು ಮಾತ್ರ ನಿರಾತಂಕವಾಗಿ ಬದುಕುವಂತಾಗಿದೆ. ನಮ್ಮ ದೇಶವು ಸಮಾಜವಾದಿ ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿದೆಯೆ ಹೊರತು, ಬಂಡವಾಳಶಾಹಿಯ ಪ್ರಭುತ್ವವನ್ನಲ್ಲ. ಆದರೆ, ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಬಂಡವಾಳಶಾಹಿ ಪರವಾದ ಪ್ರಜಾಪ್ರಭುತ್ವವನ್ನಾಗಿ ಮಾರ್ಪಡಿಸಲು ಯತ್ನಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಹಾಗೂ ಆರೆಸೆಸ್ಸ್ ಹಿಂದುತ್ವಕ್ಕೆ ಪ್ರಾಮುಖ್ಯತೆಯನ್ನು ನೀಡುವ ಮೂಲಕ ದೇಶವನ್ನು ಹಿಂದುರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಇದರಿಂದಾಗಿ, ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ನರೇಂದ್ರಮೋದಿ ಸರಕಾರದ ಆಡಳಿತದಲ್ಲಿ ಸಾಂಪ್ರದಾಯಿಕ ಶಕ್ತಿಗಳು ಮತ್ತಷ್ಟು ಬಲಿಷ್ಠವಾಗಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದಾದ್ರಿಯ ಮುಹಮ್ಮದ್ ಅಖ್ಲಾಕ್, ಜಾರ್ಖಡ್‌ನ ಮುಹಮ್ಮದ್ ಮಝ್ಲೂಮ್ ಮತ್ತು ಅಲೀಮುದ್ದೀನ್, ಹರಿಯಾಣದ ಪೆಹ್ಲೂಖಾನ್ ಮತ್ತು ಜುನೈದ್‌ಗೆ ಗೋ ರಕ್ಷಣೆಯ ಹೆಸರಿನಲ್ಲಿ ಕೆಲ ಸಂಘಟನೆಯ ಕಾರ್ಯಕರ್ತರು ಸಾರ್ವಜನಿಕವಾಗಿಯೆ ಥಳಿಸಿ ಹತ್ಯೆ ಮಾಡುವ ಮೂಲಕ, ನೆಲದ ಕಾನೂನು, ಸಂವಿಧಾನಕ್ಕೆ ಅಗೌರವ ತಂದಿರುವುದನ್ನು ಯಾರೂ ಮರೆಯುವಂತಿಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಮಾಡಿರುವ ಸಾಧನೆಗಳು, ಅಭಿವೃದ್ಧಿ ಕಾರ್ಯಗಳನ್ನು ನಾಗರಿಕರಿಗೆ ತಿಳಿಸುವುದು ಎಲ್ಲ ಕಾಂಗ್ರೆಸ್ ಕಾರ್ಯಕರ್ತರ ಕರ್ತವ್ಯ. ರಾಜ್ಯದಲ್ಲಿ ಶಾಂತಿಯ ವಾತಾವರಣವಿದೆ, ಕುಂಠಿತವಾಗಿದ್ದ ನೂರಾರು ಯೋಜನೆಗಳನ್ನು ಪೂರ್ಣಗೊಳಿಸಿ ಇತಿಹಾಸ ನಿರ್ಮಿಸಿದೆ ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.







