‘ಇಂದು ಸರ್ಕಾರ್’ಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಸಂಜಯ್ ‘ಪುತ್ರಿ’

ಮುಂಬೈ,ಜು.22:ಮಧುರ ಭಂಡಾರ್ಕರ್ ಅವರ ಮುಂಬರುವ ‘ಇಂದು ಸರ್ಕಾರ್’ ಚಿತ್ರಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿಯವರ ಪುತ್ರಿಯೆಂದು ಹೇಳಿಕೊಂಡಿರುವ ಮಹಿಳೆಯೋರ್ವರು ಬಾಂಬೆ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಚಿತ್ರದ ಕಥೆ ಏನು ಮತ್ತು ವಾಸ್ತವ ಏನು ಎನ್ನುವುದನ್ನು ವಿವರಿಸುವಂತೆ ಭಂಡಾರ್ಕರ್‌ಗೆ ನಿರ್ದೇಶ ನೀಡುವಂತೆ ಪ್ರಿಯಾ ಪಾಲ್ ಶುಕ್ರವಾರ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.
ತುರ್ತುಸ್ಥಿತಿಯ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ‘ಇಂದು ಸರ್ಕಾರ್’ ಚಿತ್ರದ ಶೇ.30ರಷ್ಟು ಭಾಗ ಮಾತ್ರ ವಾಸ್ತವಾಂಶಗಳನ್ನು ಹೊಂದಿದ್ದು, ಉಳಿದ ಭಾಗ ಕಾಲ್ಪನಿಕ ವಾಗಿದೆ ಎಂದು ಭಂಡಾರ್ಕರ್ ಇತ್ತೀಚಿಗೆ ಹೇಳಿದ್ದರು. ಚಿತ್ರ ಜು.28ರಂದು ಬಿಡುಗಡೆಯಾಗಲಿದೆ.
ವಾಸ್ತವಾಂಶಗಳಿರುವ ಚಿತ್ರದ ಭಾಗವನ್ನು ಭಂಡಾರ್ಕರ್ ಕೈಬಿಡುವವರೆಗೆ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಮತ್ತು ಸೆನ್ಸಾರ್ ಮಂಡಳಿಯು ನೀಡಿರುವ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಪಾಲ್ ನ್ಯಾಯಾಲಯವನ್ನು ಕೋರಿದ್ದಾರೆ.
ಚಿತ್ರಕ್ಕೆ ಯು/ಎ ಪ್ರಮಾಣಪತ್ರವನ್ನು ನೀಡಿರುವ ಸೆನ್ಸಾರ್ ಮಂಡಳಿಯು 12 ದೃಶ್ಯಗಳನ್ನು ತೆಗೆದು ಹಾಕುವಂತೆ ಸೂಚಿಸಿದ್ದು, ಅದನ್ನು ನಿರ್ಮಾಪಕರರು ಪಾಲಿಸಿದ್ದಾರೆ. ಅರ್ಜಿಯ ವಿಚಾರಣೆ ಜು.24ರಂದು ನಡೆಯಲಿದೆ.





