ಭೂಮಿಯ ಹಕ್ಕುಪತ್ರ ವಿತರಣೆ; ಸರಕಾರ ನುಡಿದಂತೆ ನಡೆಯುತ್ತಿದೆ: ಸಚಿವ ಎಂ.ಆರ್.ಸೀತಾರಾಂ

ಮಡಿಕೇರಿ, ಜು.22: ಜನಪರ-ಜನಪ್ರಿಯ, ಬಡಜನರ ಪರವಾದ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ಹೇಳಿದ್ದಾರೆ.
ಕುಶಾಲನಗರದ ರೈತ ಸಹಕಾರ ಭವನದಲ್ಲಿ ಶನಿವಾರ ನಡೆದ ಸೋಮವಾರಪೇಟೆ ತಾಲ್ಲೂಕಿನ ಅತ್ತೂರು, ಯಡವನಾಡು ಭೂಮಿಯನ್ನು ಕಂದಾಯ ಗ್ರಾಮವನ್ನಾಗಿ ಪ್ರಕಟಿಸಿ ಅಲ್ಲಿನ ಸಂತ್ರಸ್ತರಿಗೆ ಆರ್.ಟಿ.ಸಿ. ಹಾಗೂ 94ಸಿ ಮತ್ತು 94ಸಿಸಿ ರಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವ ಸರ್ಕಾರದಲ್ಲಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರ ಕಾಳಜಿ ಮತ್ತು ಸ್ಥಳೀಯ ಶಾಸಕರಾದ ಅಪ್ಪಚ್ಚುರಂಜನ್ ಅವರ ಶ್ರಮದಿಂದ ಅತ್ತೂರು ಮತ್ತು ಯಡವನಾಡು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ನಿರಾಶ್ರಿತರಿಗೆ ಆರ್.ಟಿ.ಸಿ. ಹಾಗೂ ಮನೆ ನಿವೇಶನದ ಹಕ್ಕುಪತ್ರ ವಿತರಣೆಯಾಗುತ್ತಿದೆ ಎಂದು ಶ್ಲಾಘಿಸಿದರು. ಹಲವು ದಶಕಗಳಿಂದ ಅತ್ತೂರು ಮತ್ತು ಯಡವನಾಡು ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಬೇಕು ಎಂದು ಒತ್ತಾಯ ಕೇಳಿ ಬರುತ್ತಿತ್ತು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದುಕೊಂಡಿದೆ. ಅದರಂತೆ ಶನಿವಾರ 254 ಮಂದಿಗೆ ಆರ್.ಟಿ.ಸಿ. ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಪ್ರಸ್ತುತ ಸರ್ಕಾರದಲ್ಲಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ನುಡಿದಂತೆ ನಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಫಾರಂ ನಂಬರ್ 50-53 ರಡಿ 800 ಜನರಿಗೆ ಹಕ್ಕು ಪತ್ರ ನೀಡಬೇಕಿದೆ. 94ಸಿರಡಿ 7 ಸಾವಿರ ಅರ್ಜಿಗಳು ಬಾಕಿ ಇದ್ದು, ಇದನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕಿದೆ ಎಂದು ಅವರು ಹೇಳಿದರು. ಅಕ್ರಮ ಸಕ್ರಮ ಯೋಜನೆಯಡಿ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸುವುದು ಬೇಡ. 50-53 ರಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಸಲಹೆ ಮಾಡಿದರು. ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಸಾರ್ವಜನಿಕರಿಗೆ ಒಳಿತು ಮಾಡಬೇಕು ಎಂಬುದು ಬಯಕೆಯಾಗಿರುತ್ತದೆ. ಅದೇ ರೀತಿ ಜನಪ್ರತಿನಿಧಿಗಳು ಸಹ ತಮ್ಮ ವ್ಯಾಪ್ತಿಯ ನಾಗರಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸದಾ ಚಿಂತನೆ ಮಾಡುತ್ತಾರೆ. ಅದಕ್ಕೆ ಅಧಿಕಾರಿಗಳ ಸಹಕಾರವೂ ಅಗತ್ಯ ಎಂದು ಶಾಸಕರು ಹೇಳಿದರು. ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರರ ಕಚೇರಿಯಲ್ಲಿ ಆರ್.ಟಿ.ಸಿ.ಗಾಗಿ ಪ್ರತಿನಿತ್ಯ ನೂಕುನುಗ್ಗಲು ಇದೆ. ಇದರಿಂದ ದೂರದಿಂದ ಬರುವ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಎರಡು ಕೌಂಟರ್ ತೆರೆದು ಆರ್.ಟಿ.ಸಿ. ವಿತರಣೆ ಮಾಡಬೇಕು. ಇದಕ್ಕಾಗಿ ಶಾಸಕರ ನಿಧಿಯಿಂದ ಹಣ ಒದಗಿಸಲಾಗುವುದು ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯ ಜನರು ಕಂದಾಯ ಇಲಾಖೆ ಕಾರ್ಯಕ್ರಮಗಳು ಹಾಗೂ ಕೆಲಸದ ಬಗ್ಗೆ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ಸರ್ಕಾರದ ಆಶಯದಂತೆ ಕಂದಾಯ ಇಲಾಖೆ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಹಾಗೂ ಸರ್ಕಾರದ ಆಶಯದಂತೆ ನಡೆದುಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ನಡೆಸುವಂತಾಗಬೇಕು ಎಂದು ವೀಣಾ ಅಚ್ಚಯ್ಯ ತಿಳಿಸಿದರು.
ರೇಷ್ಮೆ ಮಾರಾಟ ಮಂಡಳಿ ರಾಜ್ಯ ಅಧ್ಯಕ್ಷರಾದ ಟಿ.ಪಿ.ರಮೇಶ್, ಜಿ.ಪಂ.ಸದಸ್ಯರಾದ ಪೂರ್ಣಿಮ ಗೋಪಾಲ್, ಶಿವು ಮಾದಪ್ಪ, ಕೆ.ಪಿ.ಚಂದ್ರಕಲಾ, ಕುಮುದ ಧರ್ಮಪ್ಪ, ಮಂಜುಳಾ, ಸುನಿತಾ, ತಾ.ಪಂ.ಅಧ್ಯಕ್ಷರಾದ ಪುಷ್ಪರಾಜೇಶ್, ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್, ಸದಸ್ಯರಾದ ಸಬಿತಾ, ಪ್ರಮುಖರಾದ ಮಿಟ್ಟು ಚಂಗಪ್ಪ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕರಾದ ಯಾಕುಬ್ ಇತರರು ಇದ್ದರು.







