ಸರಕಾರಿ ಕಾಲೇಜುಗಳಲ್ಲಿ ಇಂಗ್ಲಿಷ್ ಕಲಿಕೆಗೆ ವಿಶೇಷ ತರಗತಿ
ಬೆಂಗಳೂರು, ಜು.22: ಸರಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಆಂಗ್ಲ ಭಾಷೆಯನ್ನು ಉತ್ತಮ ಪಡಿಸುವ ಸಲುವಾಗಿ ರವಿವಾರಗಳಲ್ಲಿ ವಿಶೇಷ ತರಗತಿ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಮುಂದಿನ ಜನವರಿವರೆಗೆ ಸುಮಾರು 28 ರವಿವಾರ ಸಿಗಲಿದ್ದು, ಆ ದಿನಗಳಲ್ಲಿ ಇಂಗ್ಲಿಷ್ ವ್ಯಾಕರಣ ಹಾಗೂ ಮಾತನಾಡುವ ಕೌಶಲವನ್ನು ಉತ್ತಮಗೊಳಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಒಂದು ನೋಡಲ್ ಕಾಲೇಜನ್ನು ಗುರುತಿಸಿ ಪ್ರತಿ ರವಿವಾರ ವಿಶೇಷ ತರಗತಿ ಆಯೋಜಿಸಲಾಗುತ್ತದೆ.
ಪ್ರತಿ ತರಬೇತಿ ಕೇಂದ್ರಕ್ಕೆ ಕನಿಷ್ಠ ಮೂವರು ಆಂಗ್ಲಭಾಷಾ ಉಪನ್ಯಾಸಕರನ್ನು ನಿಯೋಜಿಸಲಾಗುತ್ತದೆ. ವಿದ್ಯಾರ್ಥಿಗಳ ಹಾಜರಾತಿಗೆ ಪ್ರತಿ ಕೇಂದ್ರದಲ್ಲಿ ಬಯೋಮೆಟ್ರಿಕ್ ಕಡ್ಡಾಯವಾಗಿ ಅಳವಡಿಸಬೇಕು. ಇಂಗ್ಲಿಷ್ ಭಾಷಾ ಕಲಿಕೆಗೆ 90ನಿಮಿಷ, ವ್ಯಾಕರಣ ತರಗತಿಗೆ 90ನಿಮಿಷ ಪ್ರತ್ಯೇಕ ತರಗತಿ ನಡೆಸಬೇಕು. ವಿಶೇಷ ತರಗತಿಯಲ್ಲಿ ಬೋಧನೆ ಮಾಡುವ ಉಪನ್ಯಾಸಕರಿಗೆ ದಿನಕ್ಕೆ 500ರೂ.ಸಂಭಾವನೆ ನೀಡಲಾಗುತ್ತದೆ ಎಂದು ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.





