ನೌಕರರಿಂದ ಅಭಿಪ್ರಾಯ ಸಂಗ್ರಹ ಆರಂಭ
ಸರಕಾರಿನೌಕರರ ವೇತನ ಪರಿಷ್ಕರಣೆ
ಬೆಂಗಳೂರು, ಜು. 22: ರಾಜ್ಯ ಸರಕಾರಿ ನೌಕರರ ವೇತನ ಮತ್ತು ಭತ್ತೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸರಕಾರಿ ನೌಕರರು, ಪಿಂಚಣಿದಾರರು ಮತ್ತು ನೋಂದಾಯಿತ ಸಂಘಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು 6ನೆ ರಾಜ್ಯ ವೇತನ ಆಯೋಗ ಆರಂಭಿಸಿದೆ.
(www.karnataka.gov.in./paycommission)ಈ ಹಿನ್ನೆಲೆಯಲ್ಲಿ ಶನಿವಾರ ಆಯೋಗದ ವೆಬ್‌ಸೈಟ್ ನಲ್ಲಿ 37 ಪ್ರಶ್ನೆಗಳಿರುವ ಪ್ರಶ್ನಾವಳಿಯನ್ನು ಪ್ರಕಟಿಸಿದೆ. ಜು.27ರಿಂದ ಆಗಸ್ಟ್ ತಿಂಗಳಾಂತ್ಯದೊಳಗೆ ಸರಕಾರಿ ನೌಕರರ ಅಭಿಪ್ರಾಯಗಳನ್ನು ಸಂಗ್ರಹಿಸಲು ಸರಕಾರಿ ನೌಕರರ ಮತ್ತು ನೋಂದಾಯಿತ ಸಂಸ್ಥೆಗಳೊಂದಿಗೆ ಸಮಾಲೋಚನಾ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರಶ್ನಾವಳಿಗಳಿಗೆ ಬರುವ ಉತ್ತರ ಮತ್ತ ಆಕ್ಷೇಪಣೆಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್ ಮೂರ್ತಿ ತಿಳಿಸಿದ್ದಾರೆ.
ಶನಿವಾರ ನಗರದ ಕಾಫಿ ಬೋರ್ಡ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.1 ರಂದು ಸರಕಾರ 6ನೆ ವೇತನ ಆಯೋಗ ರಚಿಸಿದೆ. ಸರಕಾರಿ ಇಲಾಖೆಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಕುರಿತು ಶಿಫಾರಸ್ಸು ಮಾಡಲಾಗುವುದು. ಸರಕಾರದಲ್ಲಿನ ಆರ್ಥಿಕ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ನೌಕರರ ವೇತನ ಮತ್ತು ಭತ್ತೆಗಳನ್ನು ಪರಿಷ್ಕರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಮಾಲೋಚನೆಯ ಪ್ರಕ್ರಿಯೆ ಭಾಗವಾಗಿ ಆಯೋಗವು ಸಂಸತ್ತಿನ ಸದಸ್ಯರು, ರಾಜ್ಯ ವಿಧಾನ ಮಂಡಳದ ಸದಸ್ಯರು, ಸಂಸದರು ಹಾಗೂ ಇಲಾಖೆಗಳ ಮುಖ್ಯಸ್ಥರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದು.ಇಲಾಖೆಗಳ ಪುನರ್‌ರಚನೆ, ಸರಕಾರಿ ನೌಕರರ ದಕ್ಷತೆ ಹೆಚ್ಚಿಸಲು ಮತ್ತು ವೇತನ ಹೆಚ್ಚಿಸಲು ಯಾವ ಮಾನದಂಡ ಅನುಸರಿಸಬೇಕು ಎಂಬ ಕುರಿತು ಸಮಾಲೋಚನೆಯಲ್ಲಿ ಆಯೋಗ ಚರ್ಚಿಸಲಾಗುವುದು ಎಂದರು.
ರಾಜ್ಯದಲ್ಲಿ ಸರಕಾರಿ ಇಲಾಖೆಗಳ ನೌಕರರು, ಅನುದಾನಿತ ಸಂಸ್ಥೆಗಳು, ವಿವಿ ಬೋಧಕೇತರ ಸಿಬ್ಬಂದಿಗಳು ಸೇರಿದಂತೆ 7.73 ಲಕ್ಷ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 5.20 ಲಕ್ಷ ಮಂದಿ ಸರಕಾರಿ ನೌಕರರಿದ್ದಾರೆ. ಸುಮಾರು 6 ಲಕ್ಷ ಪಿಂಚಣಿದಾರು ರಾಜ್ಯದಲ್ಲಿದ್ದಾರೆ. ಇವರ ವೇತನಕ್ಕಾಗಿ ವಾರ್ಷಿಕವಾಗಿ 36 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ತಿಳಿಸಿದರು.
ತ್ವರಿತವಾಗಿ ವೇತನ ಪರಿಷ್ಕರಣೆಗೆ ನೂತನ ವಿಧಾನ ಅಳವಡಿಸಿಕೊಳ್ಳಲಾಗಿದೆ. ಸಾರ್ವಜನಿಕರಿಗೆ 12 ಪ್ರಶ್ನೆಗಳು, ಸರಕಾರಿ ನೌಕರರು, ಅನುದಾನಿತ ಸಂಘ ಸಂಸ್ಥೆಗಳಿಗೆ 37 ಪ್ರಶ್ನೆಗಳನ್ನು ನೀಡಲಾಗಿದೆ. ಕೂಡಲೆ ಇಲಾಖೆಗಳ ಮುಖ್ಯಸ್ಥರಿಗೆ, ಅಧಿಕಾರಿಗಳಿಗೆ ಪ್ರಶ್ನಾವಳಿಗಳನ್ನು ತಲುಪಿಸಿ, ಸರಕಾರ ಗಡುವು ನೀಡಿರುವ ನಾಲ್ಕು ತಿಂಗಳ ಅವಧಿಯೊಳಗೆ ಶಿಫಾರಸ್ಸು ಮಾಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಆಯೋಗದ ಸದಸ್ಯ ಆರ್.ಎಸ್.ಘೋಂಡೆ ಮಾತನಾಡಿ, ಸರಕಾರದ ಹಣಕಾಸಿನ ಇತಿಮಿತಿಯೊಳಗೆ ನೌಕರರ ವೇತನ ಮತ್ತು ಭತ್ತೆಗಳ ಪರಿಷ್ಕರಣೆ ಮಾಡಲು ಸರಕಾರ ಸೂಚಿಸಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸದಸ್ಯ ಮೊಹಮದ್ ಸನಾವುಲ್ಲಾ, ಕಾರ್ಯದರ್ಶಿ ಎಂ.ಮಂಜುನಾಥ್ ನಾಯ್ಕಿ ಸೇರಿದಂತೆ ಇತರರು ಇದ್ದರು.







