ಪರಪ್ಪನ ಅಗ್ರಹಾರದಲ್ಲಿ ಎಲ್ಲರಿಗೂ ಒಂದೇ ಊಟ
ನೂತನ ಎಡಿಜಿಪಿಯಿಂದ ಕೈದಿಗಳ ಹಾರಾಟಕ್ಕೆ ಕಡಿವಾಣ

ಬೆಂಗಳೂರು, ಜು.22: ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೆ ಬೀಡಿ, ಸಿಗರೇಟ್, ಗಾಂಜಾ ಹಾಗೂ ಮದ್ಯ ಸೇವೆನೆಯನ್ನು ಮಾಡುತ್ತಿದ್ದ ಕೈದಿಗಳಿಗೆ ಕಡಿವಾಣ ಬಿದ್ದಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹಾಗೂ ಛಾಪಾ ಕಾಗದ ಹಗರಣದ ಕೈದಿ ಕರೀಂಲಾಲ್ ತೆಲಗಿಗೂ ಜೈಲು ಊಟ ಗ್ಯಾರಂಟಿ ಆಗಿದೆ. ಅಲ್ಲದೆ, ಜೈಲಿನಲ್ಲಿದ್ದುಕೊಂಡೆ ಕುಟುಂಬದವರೊಂದಿಗೆ ಗಂಟೆಗಟ್ಟಲೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಕೈದಿಗಳಿಗೆ ಕಡಿವಾಣ ಬಿದ್ದಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೆಲ ಕೈದಿಗಳಿಗೆ ನೀಡುತ್ತಿದ್ದ ರಾಜಾತಿಥ್ಯ ತೀವ್ರ ಸಂಚಲನ ಸೃಷ್ಟಿಸಿ ವಿವಾದಕ್ಕೂ ಕಾರಣವಾಗಿತ್ತು. ಇದೀಗ ಜೈಲಿಗೆ ನೂತನವಾಗಿ ಬಂದಿರುವ ಎಡಿಜಿಪಿ ಎನ್.ಎಸ್.ಮೇಘರಿಕ್‌ರ ಕಡಕ್ ಆದೇಶದಿಂದ ಕೈದಿಗಳಿಗೆ ಸಿಗುತ್ತಿದ್ದ ಎಲ್ಲ ವಿಶೇಷ ಸೌಲಭ್ಯಕ್ಕೆ ಕತ್ತರಿ ಹಾಕಲಾಗಿದೆ.
ಕಾರಾಗೃಹ ಇಲಾಖೆಯ ಡಿಜಿಪಿ ಸತ್ಯನಾರಾಯಣ ರಾವ್ ಹಾಗೂ ಡಿಐಜಿ ರೂಪಾ ಅವರ ನಡುವೆ ಜೈಲಿನ ಅವ್ಯವಹಾರಗಳ ಬಗ್ಗೆ ಪರಸ್ಪರ ವಾಕ್‌ಸಮರಕ್ಕೆ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಈ ಇಬ್ಬರೂ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಆ ಜಾಗಕ್ಕೆ ಎಡಿಜಿಪಿ ಎಂ.ಎಸ್.ಮೇಘರಿಕ್ ಹಾಗೂ ಎಚ್.ಎಸ್. ರೇವಣ್ಣ ಅವರನ್ನು ಸರಕಾರ ವರ್ಗಾವಣೆ ಮಾಡಿತ್ತು.
ಎಡಿಜಿಪಿ ಎಂ.ಎಸ್. ಮೇಘರಿಕ್ ಅಧಿಕಾರ ವಹಿಸಿಕೊಂಡ ಬಳಿಕ ಜೈಲಿನಲ್ಲಿ ನಡೆಯುತ್ತಿರುವ ಎಲ್ಲ ವಿಶೇಷ ಸೌಲಭ್ಯ ನಿಲ್ಲಿಸುವಂತೆ ಕಡಕ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಕೆಲ ಕೈದಿಗಳಿಗೆ ನೀಡುತ್ತಿದ್ದ ರಾಜಾತಿಥ್ಯ ಬಂದ್ ಆಗಿದೆ.
ಕೆಲ ಕೈದಿಗಳಿಂದಾಗಿ ಇತರ ಕೈದಿಗಳು ತೊಂದರೆ ಅನುಭವಿಸುವಂತಾಗಿದೆ. ಕೈದಿಗಳನ್ನು ಭೇಟಿ ಮಾಡಲು ಬರುವ ಕುಟುಂಬದ ಸದಸ್ಯರಿಗೆ ಕೇವಲ 10 ನಿಮಿಷಗಳ ಕಾಲ ಭೇಟಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಕೈದಿಗಳಿಗೆ ಸರಬರಾಜಾಗುತ್ತಿದ್ದ ಮನೆಯೂಟವನ್ನೂ ನಿಲ್ಲಿಸಲಾಗಿದೆ. ಇದರಿಂದಾಗಿ ಕೆಲ ಕೈದಿಗಳಂತೂ ಅಕ್ಷರಶಃ ಪರಿತಪ್ಪಿಸುವಂತಾಗಿದೆ.







