2 ಕುಟುಂಬಗಳ ಐವರ ಹತ್ಯೆಗೈದವನಿಗೆ ಗಲ್ಲುಶಿಕ್ಷೆ ವಿಧಿಸಿದ ನ್ಯಾಯಾಲಯ
ಹರಳೆ ಗ್ರಾಮದಲ್ಲಿ ನಡೆದಿದ್ದ ಹತ್ಯಾಕಾಂಡ

ಚಾಮರಾಜನಗರ, ಜು.22: ಎರಡು ಕುಟುಂಬಗಳ ಐವರನ್ನು ಹತ್ಯೆ ಮಾಡಿದ ಅಪರಾಧಿಗೆ ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ 2015 ಮೇ 11ರ ಮಧ್ಯರಾತ್ರಿ ನಡೆದ ಐವರ ಬರ್ಬರ ಹತ್ಯೆ ಪ್ರಕರಣದ ಸಮರ್ಪಕ ಸಾಕ್ಷಾಧಾರಗಳನ್ನು ಪರಿಶೀಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಲಕ್ಷ್ಮಣ್ ಎಫ್. ಮಳವಳ್ಳಿ ಅವರು ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.
ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ತಾಲೂಕಿನ ಪೆರಿಯಾರ್ ನಗರದ ನಿವಾಸಿ ಮುರುಘ ಅಲಿಯಾಸ್ ಮುರುಗೇಶ್ ಗಲ್ಲು ಶಿಕ್ಷೆಗೆ ಒಳಗಾದವನು. ಈತ ತಮಿಳುನಾಡಿನ ಹಂದಿಯೂರು ತಾಲೂಕಿನ ಈರೋಡ್ ಗ್ರಾಮದ ರಾಜೇಂದ್ರನ್ ಎಂಬವರೊಂದಿಗೆ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿ ಕಬ್ಬು ಕಟಾವಿಗೆ ಬಂದಿದ್ದ.
ತಮಿಳುನಾಡಿನವರಾದ ರಾಜೇಂದ್ರನ್(37), ಪತ್ನಿ ರಾಜಮ್ಮ(35) ಹಾಗೂ ಪುತ್ರಿ ರೂಪ(8), ಕಾಶಿ ಅಲಿಯಾಸ್ ಶಿವಕುಮಾರ ಮತ್ತು ಪತ್ನಿ ಶಿವಮ್ಮ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದ ಶಿವಣ್ಣ ಎಂಬವರ ಜಮೀನಿನಲ್ಲಿ ಕಬ್ಬು ಕಟಾವು ಮಾಡಲು ಬಂದು, ಪಕ್ಕದಲ್ಲಿದ್ದ ಮಹದೇವಮ್ಮ ಎಂಬವರ ಜಮೀನಿನಲ್ಲಿದ್ದ ಮನೆಯಲ್ಲಿ ಉಳಿದುಕೊಂಡಿದ್ದರು.
ಅಪರಾಧಿ ಮುರುಘೇಶ್ ರಾಜಮ್ಮ ಹಾಗೂ ಶಿವಮ್ಮ ಅವರನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ. ಆದರೆ ಇವರು ಇದಕ್ಕೊಪ್ಪದಿದ್ದಾಗ ಕೋಪಗೊಂಡ ಮುರುಘೇಶ 2015 ಮೇ 11ರ ಮಧ್ಯರಾತ್ರಿ ಕತ್ತಿಯಿಂದ ರಾಜೇಂದ್ರನ್, ರಾಜಮ್ಮ, ರೂಪ, ಶಿವಕುಮಾರ ಹಾಗೂ ಶಿವಮ್ಮರನ್ನು ಕೊಚ್ಚಿ ಹತ್ಯೆಮಾಡಿದ್ದ. ಬಳಿಕ ರಾಜೇಂದ್ರನ್ ಬಳಿ ಇದ್ದ ಎಟಿಎಂ ಕಾರ್ಡ್ ಹಾಗೂ ಹತ್ತು ಸಾವಿರಕ್ಕೂ ಹೆಚ್ಚಿನ ಹಣವನ್ನು ತೆಗೆದು ಪರಾರಿಯಾಗಿದ್ದ.
ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಕೊಲೆ ಆರೋಪಿ ಪತ್ತೆಗೆ ಬಲೆ ಬೀಸಿದರು. 2015ರ ಮೇ 13ರಂದು ಹನೂರು ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುತ್ತಿದ್ದ ಮುರುಘೇಶ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ನಂತರ ಮುರುಘೇಶ್ ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ.
ಈ ಸಂಬಂಧ ಇಂದು ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಲಕ್ಷ್ಮಣ್ ಎಫ್. ಮಳವಳ್ಳಿ ಮುರುಘೇಶ್ ಕೊಲೆ ಮಾಡಿರುವುದು ಸಾಕ್ಷಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಆತನಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಸರಕಾರದ ಪರ ಅಭಿಯೋಜಕಿ ಟಿ.ಎಚ್.ಲೋಲಾಕ್ಷಿ ವಾದ ಮಂಡಿಸಿದರು.







