ಬಗರ್ಹುಕುಂ ಮಂಜೂರಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ: ಕುಮಾರ್‌ಬಂಗಾರಪ್ಪ

ಸೊರಬ, ಜು.22: ತಾಲೂಕಿನ ಬಗರ್‌ಹುಕುಂ ಮಂಜೂರಾತಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಕಾಗೋಡು ತಿಮ್ಮಪ್ಪ ಮತ್ತು ಮಧು ಬಂಗಾರಪ್ಪ ಪಾರ್ಟನರ್‌ಶಿಪ್ ಮೂಲಕ ಡೀಲ್ ಮಾಡಿದ್ದಾರೆ. ಅವರೆಂದೂ ರಾಜ್ಯದ ನಾಯಕರಾಗಲು ಸಾಧ್ಯವಿಲ್ಲ. ಕಾಗೋಡು ತಿಮ್ಮಪ್ಪನವರು ಈ ಹಿಂದೆಯೂ ರಾಜ್ಯ ಮತ್ತು ಜಿಲ್ಲೆಯ ನಾಯಕರಾಗಲಿಲ್ಲ, ಮುಂದೆಯೂ ಆಗುವುದಿಲ್ಲ ಎಂದು ಮಾಜಿ ಸಚಿವ ಕುಮಾರ್‌ಬಂಗಾರಪ್ಪ ವ್ಯಂಗ್ಯವಾಡಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲು ಕಾಂಗ್ರೇಸ್ ಪಕ್ಷದ ಸದಸ್ಯರು ಬಗರ್‌ಹುಕುಂ ಸಮಿತಿಯಲ್ಲಿದ್ದಾಗ ಸಭೆಯನ್ನೆ ಕರೆಯದ ಮಧುಬಂಗಾರಪ್ಪ ಜೆಡಿಎಸ್ ಕಾರ್ಯಕರ್ತರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಿಕೊಂಡು ಸಭೆಗಳನ್ನು ನಡೆಸಿ ವ್ಯವಹಾರ ಆರಂಭಿಸಿದರು. ಈಗ ಕೋಟೆ ಕೊಳ್ಳೆ ಹೊಡೆದ ಮೆಲೆ ಪುನಃ ಕಾಂಗ್ರೇಸ್ ಸದಸ್ಯರನ್ನು ಕಾಗೋಡು ತಿಮ್ಮಪ್ಪ ನೇಮಿಸಿದ್ದಾರೆ. ಇಬ್ಬರೂ ಸೇರಿ ಇಡೀ ಬಾಳೇಹಣ್ಣು ನುಂಗಿ, ಸಿಪ್ಪೆಯನ್ನು ಮಾತ್ರ ಈಗ ಹೊಸ ಸಮಿತಿ ದಸ್ಯರಿಗೆ ನೀಡಿದ್ದಾರೆ ಎಂದು ಕುಟುಕಿದರು.
ಬಿಜೆಪಿ ಪಕ್ಷದಿಂದ ಕೈಗೊಂಡ ವಿಸ್ತಾರಕ ಯೋಜನೆ ಅನ್ವಯ ಪ್ರತಿ ಗ್ರಾಮಕ್ಕೂ ಭೇಟಿ ನೀಡಿದಾಗ ಬಗರ್ಹುಕುಂ ಸಮಿತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಗೊಚರವಾಗಿದೆ. ಇದಕ್ಕೆ ಶಾಸಕ ಮಧು ಬಂಗಾರಪ್ಪನವರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರು ಕಾರಣಕರ್ತರಾಗಿದ್ದಾರೆ. ಇವರಿಬ್ಬರೂ ಭ್ರಷ್ಟ ಅಧಿಕಾರಿಗಳನ್ನು ಜಿಲ್ಲೆಯಲ್ಲಿ ಇಟ್ಟುಕೊಂಡು ಈ ಅವ್ಯವಹಾರಕ್ಕೆ ಸಹಕಾರ ಪಡೆದಿದ್ದಾರೆ. ದ್ವಾರಹಳ್ಳಿ, ನಡಹಳ್ಳಿ, ಜೋಳದಗುಡ್ಡೆ, ಹರೀಶಿ, ಬರಗಿ ಮೊದಲಾದ ್ರಾಮಗಳಲ್ಲಿ ದ್ವೇಷದ ವಾತವರಣವನ್ನು ಶಾಸಕರು ನಿರ್ಮಿಸಿದ್ದಾರೆ. ಶಿವಮೊಗ್ಗ, ಸಿದ್ದಾಪುರ ಸೇರಿದಂತೆ ತಾಲೂಕಿನ ಹೊರಗಿನವರಿಗೂ ಸ್ಮಶಾನ, ಕೆರೆ, ಅರಣ್ಯಭೂಮಿಯನ್ನು ಬಗರ್ಹುಕುಂ ಹೆಸರಿನಲ್ಲಿ ಮಂಜೂರಾತಿ ಮಾಡಿದ್ದು, ಇವು ವಜಾಗೊಳ್ಳಲಿವೆ ಎಂದರು.
ನರಗುಂದದಲ್ಲಿ ನಡೆದ ಸಭೆಯಲ್ಲಿ ಶಾಸಕ ಮಧು ಬಂಗಾರಪ್ಪ ಮಾಜಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನುದ್ದೇಶಿಸಿ ಕೆಟ್ಟ ರಕ್ತ, ಕಚಡ ಮುಂತಾದ ಅನಾಗರೀಕ ಭಾಷೆಗಳನು್ನ ಬಳಸಿರುವುದು ಖಂಡನೀಯ ಎಂದ ಕುಮಾರ್ ಬಂಗಾರಪ್ಪ, ಸ್ಥಳೀಯ ಶಾಸಕರ ಇಂತಹ ಅಸಭ್ಯ ಮಾತುಗಳು ಸೊರಬ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ. ವಿರೋಧಿಗಳನ್ನು ಟೀಕಿಸುವುದು ಸರಿಯಾದರೂ ಅಸಂಬದ್ಧವಾದ ತೀರಾ ಕೆಳಮಟ್ಟದ ಪದವನ್ನು ಎಂದಿಗೂ ಬಳಸಬಾರದು. ಇಂತಹ ಬೇಜವಾಬ್ದಾರಿಯುತವಾಗಿ ಮಾತನಾಡಿದ ಮಧು ಬಂಗಾರಪ್ಪ ಕೂಡಲೇ ಸಾರ್ವತ್ರಿಕ ಕ್ಷಮೆಯಾಚಿಸಬೇಕು ಎಂದರು.
ಪಪಂ ಸದಸ್ಯ ಎಂ.ಡಿ. ಉಮೇಶ, ಪ್ರಮುಖರಾದ ದಿವಾಕರಭಾವೆ, ತಬಲಿ ಬಂಗಾರಪ್ಪ, ಚಂದ್ರಪ್ಪ ಸಿಗ್ಗದ, ಕೊಡಕಣಿ ಕೃಷ್ಣಮೂರ್ತಿ, ಭೋಗೇಶ, ಶಬ್ಬೀರ್ ಅಹ್ಮದ್ ಕಿಲ್ಲೇದಾರ್, ಗಣಪತಿ ಕೊಡಕಣಿ ಮತ್ತಿತರರಿದ್ದರು.







