ಟಿಪ್ಪರ್ ಲಾರಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆ
ಚಿಕ್ಕಬಳ್ಳಾಪುರ, ಜು.22: ಕಾಮಗಾರಿಗಾಗಿ ಎಂಸ್ಯಾಂಡ್ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿರುವ ಘಟನೆ ನಂದಿಗಿರಿಧಾಮ ಪೊಲೀಸ್ ಠಾಣೆ ವ್ಯಾಪ್ತಿಯ ಮೇಗಾ ಡೈರಿ ಬಳಿ ನಡೆದಿದೆ.
ನಗರದ ರಾಷ್ಟ್ರೀಯ ಹೆದ್ದಾರಿ-7ರ ನಂದಿ ಕ್ರಾಸ್ ಸಮೀಪ ನಿರ್ಮಾಣ ಹಂತದಲ್ಲಿರುವ ಮೇಗಾ ಡೈರಿಗೆ ದೇವನಹಳ್ಳಿ ತಾಲೂಕಿನ ಮುದ್ದನಾಯಕನಹಳ್ಳಿ ಸಮೀಪದ ಮಂಜುನಾಥ ಸ್ಟೋನ್ ಕ್ರಷರ್‌ನಿಂದ ಕೆ.ಎ.43, 8251 ಸಂಖ್ಯೆವುಳ್ಳ ಟಿಪ್ಪರ್ ಲಾರಿಯಿಂದ ಎಂಸ್ಯಾಂಡ್ ಮರಳು ತರಿಸಲಾಗಿತ್ತು. ಆದರೆ ಎಂಸ್ಯಾಂಡ್ ಮರಳನ್ನು ಟಿಪ್ಪರ್‌ನಿಂದ ಡಪಿಂಗ್ ಮಾಡುವ ವೇಳೆ ವ್ಯಕ್ತಿಯ ಮೃತ ದೇಹ ಕೆಳಗೆ ಬಿದ್ದಿದೆ. ಈ ವೇಳೆ ಮೃತ ದೇಹ ನೋಡಿ ಗಾಬರಿಗೊಂಡ ಟಿಪ್ಪರ್‌ನ ಕೂಲಿ ಕಾರ್ಮಿಕರು ತಕ್ಷಣ ನಂದಿಗಿರಿಧಾಮ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಅಪರಿಚಿತ ವ್ಯಕ್ತಿಯ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಸುಮಾರು 30 ವರ್ಷ ವಯೋಮಾನದ ಯುವಕನ ಹೆಸರನ್ನು ಡೆತ್ ನೋಟ್ ಮೂಲಕ ಪತ್ತೆಯಾಗಿದ್ದು, ವಿಳಾಸ ಸೇರಿದಂತೆ ಬೇರೆ ಯಾವುದೆ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ನಾನು ಸಾಯುತ್ತಿದ್ದೇನೆ. ಕುಟುಂಬದವರ ಅತಿಯಾದ ಕಿರುಕುಳವೇ ಸಾವಿಗೆ ಕಾರಣ ಎಂದು ಆಂಗ್ಲ ಭಾಷೆಯಲ್ಲಿ ಬರೆದಿರುವ ಪತ್ರ ದೊರಕಿದೆ. ಸಾಯಲು ನಾಗರತ್ನ, ನಾರಾಯಣ, ಗಾಯತ್ರಿ, ಶಾರದಾ ಅವರು ಕಾರಣ ಎಂದು ಹೆಸರು ನಮೂದಿಸಿದ್ದಾನಲ್ಲದೆ, ಅದರಲ್ಲಿ ಪ್ರಶಾಂತ ಎಂದು ಹೆಸರು ನಮೂದಿಸಿದ್ದಾನೆ.
ಘಟನಾ ಸ್ಥಳಕ್ಕೆ ಆರಕ್ಷಕ ವೃತ್ತ ನಿರೀಕ್ಷಕ ಶಿವಸ್ವಾಮಿ, ನಂದಿಗಿರಿಧಾಮ ಠಾಣೆ ಆರಕ್ಷಕ ಉಪ ನಿರೀಕ್ಷಕ ಪ್ರಕಾಶಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣವನ್ನು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







