ಧೋವಲ್ ಚೀನಾ ಭೇಟಿಯಿಂದ ಡೋಕ ಲಾ ಗಡಿ ಬಿಕ್ಕಟ್ಟು ಶಮನ ಸಾಧ್ಯತೆ
ಚೀನಾ ರಾಜಕೀಯ ವಿಶ್ಲೇಷಕರ ಅನಿಸಿಕೆ

ಬೀಜಿಂಗ್,ಜು.22: ಬ್ರಿಕ್ಸ್ ಸಮೂಹದ ರಾಷ್ಟ್ರಗಳ ಭದ್ರತಾ ಅಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಬೀಜಿಂಗ್‌ಗೆ ಭೇಟಿ ನೀಡಲಿರುವುದು, ಭಾರತ ಹಾಗೂ ಚೀನಾ ನಡುವೆ ಡೋಕಾ ಲಾ ಪ್ರದೇಶದಲ್ಲಿ ಉಂಟಾಗಿರುವ ಸಂಘರ್ಷಾವಸ್ಥೆಯನ್ನು ಶಮನಗೊಳಿಸಲು ನೆರವಾಗಲಿದೆಯೆಂದು ಚೀನಿ ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಿಸಿದ್ದಾರೆ.
ದೋವಲ್ ಅವರು ಜುಲೈ 27,28ರಂದು ಬೀಜಿಂಗ್‌ಗೆ ಭೇಟಿ ನೀಡಲಿದ್ದಾರೆ.
ಚೀನಾದ ಭದ್ರತಾ ಸಲಹೆಗಾರ ಯಾಂಗ್ ಜಿಯೆಚಿ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಬ್ರಿಕ್ಸ್ ದೇಶಗಳಾದ ಬ್ರೆಜಿಲ್, ರಶ್ಯ, ಚೀನಾ, ದಕ್ಷಿಣ ಆಫ್ರಿಕಾ ಹಾಗೂ ಭಾರತದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಧೋವಲ್ ಅವರ ಚೀನಾ ಭೇಟಿಯು ಮಹತ್ವದ್ದಾಗಿದೆ ಹಾಗೂ ಭಾರತ-ಚೀನಾ ಮಧ್ಯೆ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆಗೊಳಿಸಲು ಒದಗಿಸಿರುವ ಒಂದು ಸದವಕಾಶವಾಗಿದೆಯೆಂದು ಚೀನಾದ ಸುಧಾರಣಾ ವೇದಿಕೆಯ ರಾಜಕೀಯ ವಿಶ್ಲೇಷಕರಾದ ಮಾ ಜಿಯಾಲಿ ತಿಳಿಸಿದ್ದಾರೆ.
ಸಿಕ್ಕಿಂ ಗಡಿಯಲ್ಲಿರುವ ಡೋಕ ಲಾದಲ್ಲಿ ಭಾರತ ಹಾಗೂ ಚೀನಾ ಪಡೆಗಳ ನಡುವೆ ಸಂಘರ್ಷ ಪರಿಸ್ಥಿತಿ ಉಂಟಾಗಿರುವುದನ್ನು ಬಗೆಹರಿಸಲು ದೋವಲ್ ಹಾಗೂ ಯಾಂಗ್ ಮಾತುಕತೆ ನಡೆಸುವ ಸಾಧ್ಯತೆಯಿದೆಯೆಂದು ಚೀನಿ ಅಧಿಕಾರಿಗಳು ತಿಳಿಸಿದ್ದಾರೆ.
ದೋವಲ್ ಭೇಟಿಯ ವೇಳೆ ಚೀನಾವು ಡೋಕಾ ಲಾ ವಿಷಯವಾಗಿ ತನ್ನ ಅಹವಾಲನ್ನು ಭಾರತಕ್ಕೆ ಸಲ್ಲಿಸಲಿದೆ. ಭಾರತವು ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುವ ನಿಟ್ಟಿನಲ್ಲಿ ಚೌಕಾಶಿಯಾಗಿ ಕೆಲವೊಂದು ಬೇಡಿಕೆಗಳನ್ನು ಮುಂದಿಡುವ ಸಾಧ್ಯತೆಯಿದೆ’’ ಭಾರತ-ಚೀನಾ ಅಧ್ಯಯನ ತಜ್ಞರೂ ಆಗಿರುವ ಮಾ ಜಿಯಾಲಿ ತಿಳಿಸಿದ್ದಾರೆ.
ಆದಾಗ್ಯೂ ಈ ವಿಷಯವಾಗಿ ಭಾರತ-ಚೀನಾ ಒಪ್ಪಂದಕ್ಕೆ ಬರಲು ವಿಫಲವಾದಲ್ಲಿ ಉಭಯದೇಶಗಳ ಬಾಂಧವ್ಯಕ್ಕೆ ಗಂಭೀರವಾದ ಧಕ್ಕೆಯುಂಟಾಗಲಿದೆಯೆಂದು ಮಾ ಎಚ್ಚರಿಕೆ ನೀಡಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳ ಶೃಂಗಸಭೆಯು ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.







