ಸುರಕ್ಷಿತವಾಗಿ ಉದ್ಯಾವರ ತಲುಪಿದ ಮದ್ರಸ ವಿದ್ಯಾರ್ಥಿಗಳು

ಉಡುಪಿ, ಜು.22: ಕೆಲವು ಗೊಂದಲಗಳಿಂದಾಗಿ ಮಂಗಳೂರು ರೈಲ್ವೆ ಪೊಲೀಸರ ಮೂಲಕ ಬೊಂದೇಲ್‌ನ ಮಕ್ಕಳ ಪರಿವೀಕ್ಷಣಾ ಕೇಂದ್ರದ ವಶದಲ್ಲಿದ್ದ ಉಡುಪಿ ಉದ್ಯಾವರದ ಖಲೀಮ ಏಜುಕೇಶನ್ ಆ್ಯಂಡ್ ವೆಲ್‌ಫೇರ್ ಟ್ರಸ್ಟ್‌ನ ಅರೇಬಿಕ್ ಮದ್ರಸದ 13 ಮಂದಿ ಬಿಹಾರ ರಾಜ್ಯದ ವಿದ್ಯಾರ್ಥಿಗಳನ್ನು ಇಂದು ರಾತ್ರಿ 8:30ರ ಸುಮಾರಿಗೆ ಮಂಗಳೂರಿನಿಂದ ಉದ್ಯಾವರಕ್ಕೆ ಸುರಕ್ಷಿವಾಗಿ ಕರೆದುಕೊಂಡು ಬರಲಾಯಿತು.
‘ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಈ ಮದ್ರಸದಲ್ಲಿ ಸ್ಥಳೀಯರು ಸೇರಿದಂತೆ ಒಟ್ಟು 30 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಳೆದ ವರ್ಷ ಬಿಹಾರ ರಾಜ್ಯದ 16 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. ಈ ಬಾರಿಯ ರಜೆಯಲ್ಲಿ ಅವರೆಲ್ಲರು ಊರಿಗೆ ಹೋಗಿದ್ದರು. ಇವರ ಪೈಕಿ ಇಬ್ಬರು ದೆಹಲಿ ಮದ್ರಸಕ್ಕೆ ಸೇರ್ಪಡೆಗೊಂಡರೆ, ಓರ್ವನ ಶಿಕ್ಷಣ ಪೂರ್ಣಗೊಂಡಿತ್ತು. ಐದು ಮಂದಿ ವಿದ್ಯಾರ್ಥಿಗಳನ್ನು ಅವರ ಮನೆಯವರು ದೂರದ ಊರು ಎಂಬುದಾಗಿ ಕಳುಹಿಸದೆ ಅಲ್ಲೇ ಉಳಿಸಿಕೊಂಡಿದ್ದರು. ಉಳಿದ 6 ಮಕ್ಕಳು ಮತ್ತು ಏಳು ಮಂದಿ ಹೊಸ ಮಕ್ಕಳು ಸಹಿತ ಒಟ್ಟು 13 ಮಕ್ಕಳು ಜು.19ರಂದು ಬಿಹಾರದಿಂದ ರೈಲಿನಲ್ಲಿ ಹೊರಟಿದ್ದರು’ ಎಂದು ಟ್ರಸ್ಟ್‌ನ ಸದಸ್ಯ ಅಬ್ದುಲ್ ಅಝೀಮ್ ಪತ್ರಿಕೆಗೆ ತಿಳಿಸಿದರು.
‘ರೈಲಿನಲ್ಲಿ ಮಕ್ಕಳೊಂದಿಗೆ ಬರುವುದಾಗಿ ಪೋಷಕರು ನಮಗೆ ಮೊದಲು ತಿಳಿಸಿದ್ದರು. ಅವರು ಕೊನೆಯ ಗಳಿಗೆಯಲ್ಲಿ ಕರೆ ಮಾಡಿ ಮಕ್ಕಳನ್ನು ರೈಲಿನಲ್ಲಿ ಕಳುಹಿಸಿ ಕೊಟ್ಟಿದ್ದೇವೆ. ನೀವು ಮಂಗಳೂರಿಗೆ ಬಂದು ಅವರನ್ನು ಕರೆದುಕೊಂಡು ಹೋಗಿ ಎಂದು ತಿಳಿಸಿದರು. ಹಾಗೆ ನಾವು ಹೊರಡುವಾಗ ಸ್ವಲ್ಪ ವಿಳಂಬವಾಗಿ ಕೆಲವೊಂದು ಗೊಂದಲಕ್ಕೆ ಕಾರಣವಾಯಿತು’ ಎಂದು ಅವರು ಹೇಳಿದರು.
‘ಆದರೂ ನಾವು ನಮ್ಮ ಗೆಳೆಯರನ್ನು ರೈಲ್ವೆ ನಿಲ್ದಾಣಕ್ಕೆ ಕಳುಹಿಸಿಕೊಟ್ಟಿದ್ದೇವೆ. ಆದರೆ ರೈಲ್ವೆ ಪೊಲೀಸರು ಮದ್ರಸದ ದಾಖಲೆಗಳಿಲ್ಲದೆ ಮಕ್ಕಳನ್ನು ಕಳುಹಿಸಿ ಕೊಡುವುದಿಲ್ಲ ಎಂದು ತಿಳಿಸಿದರು. ಹಾಗೆ ಟ್ರಸ್ಟ್‌ನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹಾಗೂ ನಾನು ಹೋಗಿದ್ದೆವು. ಆಗಲೇ ಪೊಲೀಸರು ಮಕ್ಕಳನ್ನು ಮಕ್ಕಳ ಪರಿವೀಕ್ಷಣಾ ಕೇಂದ್ರಕ್ಕೆ ಒಪ್ಪಿಸಿದ್ದರು. ಬಳಿಕ ನಾವು ಕೇಂದ್ರಕ್ಕೆ ನಮ್ಮ ಮದ್ರಸದ ದಾಖಲೆ ಪತ್ರಗಳನ್ನು ಒಪ್ಪಿಸಿ ಎಲ್ಲ 13 ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದೇವೆ’ ಎಂದರು.
ಈ 13 ಮಕ್ಕಳ ಪೈಕಿ 10 ಮಂದಿಯಲ್ಲಿ ಆಧಾರ್ ಕಾರ್ಡ್ ಇದೆ. ಆದರೆ ಉಳಿದ ಮೂವರಲ್ಲಿ ಇರಲಿಲ್ಲ. ಎಲ್ಲರೂ ಬಿಹಾರ ರಾಜ್ಯದವರಾಗಿದ್ದರೂ ಅವರಲ್ಲಿ ಓರ್ವನ ಆಧಾರ್ ಕಾರ್ಡ್‌ನಲ್ಲಿ ಪಶ್ಚಿಮ ಬಂಗಾಳ ಎಂಬುದಾಗಿ ನಮೂದಿಸಲಾಗಿತ್ತು. ಇವರೆಲ್ಲ 11ರಿಂದ 17ವರ್ಷ ವಯಸ್ಸಿನ ಮಕ್ಕಳಾಗಿದ್ದಾರೆ. ಇವರಿಗೆ ಧಾರ್ಮಿಕ ಶಿಕ್ಷಣದ ಜೊತೆ ಉದ್ಯಾವರದ ಮೇಲುಪೇಟೆಯ ಖಾಸಗಿ ಶಾಲೆಯಲ್ಲಿ ಲೌಕಿಕ ಶಿಕ್ಷಣವನ್ನೂ ನೀಡುತ್ತಿದ್ದೇವೆ. ಈ ಮದ್ರಸದಲ್ಲಿ ಎಲ್ಲರಿಗೂ ಉಚಿತ ಶಿಕ್ಷಣ, ವಸತಿ, ಊಟದ ವ್ಯವಸ್ಥೆಯನ್ನು ನೀಡಲಾಗುತ್ತಿದೆ. ಮದ್ರಸ ಸ್ಥಾಪನೆಗೊಂಡ ಆರಂಭದಲ್ಲಿ ಕೇವಲ ಸ್ಥಳೀಯ ಮಕ್ಕಳು ಮಾತ್ರ ಇದ್ದರು. ಕಳೆದ ವರ್ಷದಿಂದ ಹೊರರಾಜ್ಯದ ಬಡ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗುತ್ತಿದೆ ಎಂದು ಅಬ್ದುಲ್ ಅಝೀಮ್ ಪತ್ರಿಕೆಗೆ ತಿಳಿಸಿದರು.







