ಮಕ್ಕಳ ಹಕ್ಕು ರಕ್ಷಣೆಗೆ ಕಾರ್ಯಪಡೆ ರಚನೆ: ಪ್ರಿಯಾಂಕ

ಉಡುಪಿ, ಜು.22: ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪ್ರತ್ಯೇಕ ಕಾರ್ಯಪಡೆಯನ್ನು ರಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯಲ್ಲಿ ತಳಮಟ್ಟದಿಂದ ಈ ಕಾರ್ಯಪಡೆಯನ್ನು ರಚಿಸುವ ಉದ್ದೇಶ ದಿಂದ ಮೊದಲ ಹಂತದಲ್ಲಿ ಎಲ್ಲಾ ಗ್ರಾಪಂಗಳಲ್ಲಿ ಕಾರ್ಯಪಡೆ ರಚಿಸಲಾಗುವುದು. ಈ ಕಾರ್ಯಪಡೆಯಲ್ಲಿ ಶೇ.60ರಷ್ಟು ಮಕ್ಕಳು ಸದಸ್ಯರಾಗಲಿದ್ದು, ಉಳಿದ ಶೇ.40ರಲ್ಲಿ ಜನಪ್ರತಿನಿಧಿಗಳು, ಮಕ್ಕಳ ಮಿತ್ರರು ಹಾಗೂ ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇರಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗ್ರಾಪಂನಲ್ಲಿ ಕಾರ್ಯಪಡೆ ರಚಿಸುವ ಕುರಿತು ಜಿಲ್ಲೆಯ ಎಲ್ಲಾ ಗ್ರಾಪಂ ಗಳಿಗೆ ಸೂಚನೆ ನೀಡಲಾಗುವುದು. ಅಲ್ಲದೇ ಕಾರ್ಯಪಡೆಗೆ ಮಕ್ಕಳನ್ನು ನೇಮಿಸುವ ಕುರಿತು ವಿವಿಧ ರೀತಿಯಲ್ಲಿ ಆಯ್ಕೆ ನಡೆಸಲಾಗುವುದು ಎಂದ ಜಿಲ್ಲಾಧಿಕಾರಿ, ನಂತರದ ಹಂತದಲ್ಲಿ ತಾಪಂ ಹಾಗೂ ಜಿಪಂ ಹಂತದಲ್ಲಿ ಈ ಕಾರ್ಯ ಪಡೆಯನ್ನು ರಚಿಸಲಾಗುವುದು ಎಂದರು. ಕಾರ್ಯಪಡೆಯ ಕಾರ್ಯ ವಿಧಾನಗಳು ಹಾಗೂ ಮಕ್ಕಳ ಸಹಾಯವಾಣಿ ಮತ್ತು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಮಕ್ಕಳ ಕಾರ್ಯಪಡೆಗೆ ಲೋಗೋ ಸಿದ್ದಪಡಿಸುವ ಕುರಿತಂತೆ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ, ಉತ್ತಮ ಚಿತ್ರವನ್ನು ಆಯ್ಕೆ ಮಾಡಿ ಲೋಗೋವನ್ನಾಗಿ ಆಯ್ಕೆ ಮಾಡುವಂತೆ ಉಪ ವಿಬಾಗಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.
ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ಕೆ. ನಾರಾಯಣ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಚಂದ್ರ ಅರಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ ಗಳು, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.







