ಅಫ್ಘಾನ್: ಅಮೆರಿಕದ ವಾಯುದಾಳಿಗೆ ನಾಶವಾಗಿದ್ದ ಎಂಎಸ್‌ಎಫ್ ಆಸ್ಪತ್ರೆ ಪುನಾರಂಭ

ಕಾಬೂಲ್,ಜು.22: ಅಮೆರಿಕದ ವಾಯುದಾಳಿಯಲ್ಲಿ ತನ್ನ ಆಸ್ಪತ್ರೆಯು ನಾಶವಾಗಿ, 40ಕ್ಕೂ ಅಧಿಕ ಮಂದಿ ಮೃತಪಟ್ಟ ಘಟನೆ ನಡೆದ ಎರಡು ವರ್ಷಗಳ ಬಳಿಕ ಜಾಗತಿಕ ವೈದ್ಯಕೀಯ ಸೇವಾಸಂಸ್ಥೆ ಮೆಡಿಸಿನ್ಸ್ ಸ್ಯಾನ್ಸ್ ಫ್ರಂಟಿಯರ್ಸ್, ಅಫ್ಘಾನಿಸ್ತಾನದ ಕುಂದುಝ್ ಪ್ರಾಂತ್ಯದಲ್ಲಿ ಸಣ್ಣದೊಂದು ಆಸ್ಪತ್ರೆಯನ್ನು ಆರಂಭಿಸಿದೆ.
ಓರ್ವ ಡಾಕ್ಟರ್ ಹಾಗೂ ಐದು ನರ್ಸ್‌ಗಳನ್ನು ಒಳಗೊಂಡಿರುವ ಈ ನೂತನ ಆಸ್ಪತ್ರೆಯು ಸಣ್ಣಪುಟ್ಟ ಹಾಗೂ ದೀರ್ಘಸಮಯದ ಗಾಯಗಳಿಗೆ ಚಿಕಿತ್ಸೆ ನೀಡಲಿದೆ.
2015ರಲ್ಲಿ ಕುಂದುಝ್‌ನಲ್ಲಿರುವ ತನ್ನ ಆಸ್ಪತ್ರೆಯ ಮೇಲೆ ಅಮೆರಿಕದ ವಾಯುಪಡೆ ಬಾಂಬ್‌ದಾಳಿ ನಡೆಸಿದ್ದರಿಂದ 24 ರೋಗಿಗಳು ಹಾಗೂ 14 ಮಂದಿ ಸಿಬ್ಬಂದಿ ಸೇರಿದಂತೆ 42 ಮಂದಿ ಮೃತಪಟ್ಟ ಬಳಿಕ ‘ಮೆಡಿಸಿನ್ಸ್ ಸ್ಯಾನ್ಸ್ ಫ್ರಂಟಿಯರ್ಸ್ ’ಅಫ್ಘಾನಿಸ್ತಾನದಲ್ಲಿ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿತ್ತು. ಇದೀಗ ತನ್ನ ಆಸ್ಪತ್ರೆಯ ಮೇಲೆ ದಾಳಿ ನಡೆಸದಂತೆ ಅದು ಅಮೆರಿಕ ಹಾಗೂ ಅಫ್ಘಾನ್‌ಸೇನೆ ಹಾಗೂ ತಾಲಿಬಾನ್ ಬಂಡುಕೋರರಿಂದ ಭರವಸೆಯನ್ನು ಕೋರಿದೆ.
Next Story





