ಜಮ್ಮುಕಾಶ್ಮೀರದಲ್ಲಿ ಭಾರೀ ಮಳೆ: 6 ಸಾವು

ಹೊಸದಿಲ್ಲಿ, ಜು. 22: ಹೊಸದಿಲ್ಲಿ ಸೇರಿದಂತೆ ರಾಷ್ಟ್ರಾದ್ಯಂತ ಇಂದು ಭಾರೀ ಮಳೆ ಸುರಿದಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಮೋಡ ಸ್ಫೋಟದಿಂದ ಪ್ರವಾಹ ಉಂಟಾಗಿದ್ದು, ಆರು ಮಂದಿ ಕೊಚ್ಚಿಕೊಂಡು ಹೋಗಿದ್ದಾರೆ.
ಅಸ್ಸಾಂನಲ್ಲಿ ಪ್ರವಾಹ ಇಳಿದಿದೆ. ಆದಾಗ್ಯೂ, ರಾಜ್ಯದ 13 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ. ಜಮ್ಮು ಹಾಗೂ ಕಾಶ್ಮೀರದ ದೋಡಾ ಜಿಲ್ಲೆಯ ಥಾತ್ರಿ ಪಟ್ಟಣದಲ್ಲಿ ಪ್ರವಾಹದಿಂದ ತೊಂದರೆ ಉಂಟಾಗಿದೆ. ಬಾಟೋಟ್ ಕೀಸ್ತ್ವರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹದಿಂದ 12ಕ್ಕೂ ಅಧಿಕ ಮನೆಗಳು ಕೊಚ್ಚಿಕೊಂಡು ಹೋಗಿವೆ.
ಪ್ರವಾಹದಿಂದ 6 ಮಂದಿ ಮೃತಪಟ್ಟಿದ್ದಾರೆ. ಕುಸಿದ ಕಟ್ಟಡಗಳ ಅವಶೇಷಗಳ ಅಡಿಯಿಂದ 11 ಅಧಿಕ ಜನರನ್ನು ರಕ್ಷಿಸಲಾಗಿದೆ. ಇನ್ನೂ ಕೆಲವರು ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್‌ನ ಸೌರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಪ್ರವಾಹ ತಲೆದೋರಿದೆ. ಪ್ರವಾಹದಿಂದಾಗಿ ಮೂವರು ಮೃತಪಟ್ಟಿದ್ದಾರೆ ಎಂದು ಸರಕಾರ ತಿಳಿಸಿದೆ.
ಪಶ್ಚಿಮಬಂಗಾಳದ ಕೊಲ್ಕತಾದಲ್ಲಿ ಭಾರೀ ಮಳೆ ಸುರಿದಿದೆ. ತೆಲಂಗಾಣದಲ್ಲಿ ಮಳೆ ಮುಂದುವರಿದಿದೆ.







