‘ಹೆಜ್ಜೆ ಗುರುತು’ವಿನಲ್ಲಿ ಸಾಲುಮರದ ತಿಮ್ಮಕ್ಕ ಯಶೋಗಾಥೆ

ಉಡುಪಿ, ಜು.22: ಉಡುಪಿ ಬೀಯಿಂಗ್ ಸೋಶಿಯಲ್, ತ್ರಿಶಾ ಕ್ಲಾಸಸ್ ಹಾಗೂ ಎಂಜಿಎಂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ‘ಹೆಜ್ಜೆ ಗುರುತು’ 4ನೆ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ತಮ್ಮ ಜೀವನ ಯಶೋಗಾಥೆಯನ್ನು ಸಭಿಕರ ಮುಂದಿಟ್ಟರು.
ತಿಮ್ಮಕ್ಕನವರ ದತ್ತು ಪುತ್ರ ವನಸಿರಿ ಉಮೇಶ್ ಮಾತನಾಡಿ, ಪರಿಸರ ಸಂರಕ್ಷಣೆ ಇಂದು ಜಗತ್ತಿನ ಬಹಳ ದೊಡ್ಡ ಸವಾಲು ಆಗಿದೆ. ಆದರೆ ತಿಮ್ಮಕ್ಕ ಅವರು ಇದನ್ನು ಆ ಕಾಲದಲ್ಲೇ ಮಾಡಿದ್ದರು. ಗುಬ್ಬಿ ತಾಲೂಕಿನಲ್ಲಿ ಜನಿಸಿದ ಇವರು ಬಹಳ ಕಷ್ಟ ಬದುಕನ್ನು ಕಂಡರು. ಇವರ ತಾಯಿಯೇ ಇವರಿಗೆ ಹಿಂಸೆ ನೀಡು ತ್ತಿದ್ದರು. ತನ್ನ ಎಳೆಯ ಪ್ರಾಯದಲ್ಲೇ ಬೇರೆಯವರಿಗೆ ಮನೆಯಲ್ಲಿದ್ದ ಅನ್ನ, ಪದಾರ್ಥಗಳನ್ನು ದಾನ ಮಾಡುತ್ತಿದ್ದರು. ಒಮ್ಮೆ ಇವರ ಅತ್ಯಾಚಾರ ಯತ್ನ ಕೂಡ ನಡೆದಿತ್ತು ಎಂದರು.
19ನೆ ವರ್ಷದಲ್ಲಿ ಮದುವೆಯಾದ ತಿಮ್ಮಕ್ಕ ಅದರ ನಂತರವೂ ಸಾಕಷ್ಟು ನೋವನ್ನು ಉಂಡರು. ಮಕ್ಕಳಾಗದೆ ಸಮಾಜದ ಮಾನಸಿಕ ಕಿರುಕುಳಗಳನ್ನು ಅನುಭವಿಸಿದರು. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ನಿಶ್ಚಯಿಸಿದ್ದರು. ಬಳಿಕ ಮಕ್ಕಳಿಲ್ಲದ ಕೊರಗಿನಿಂದ ಹೊರಗೆ ಬಂದು ಹುಲಿಕಲ್‌ನಿಂದ ನಾಲ್ಕು ಕಿ.ಮೀ. ಉದ್ದದ ರಸ್ತೆಯ ಎರಡು ಬದಿಗಳಲ್ಲಿ ಮರಗಳನ್ನು ನೆಟ್ಟು ಪೊಷಿಸಿದರು. 1948 ರಿಂದ ಗಿಡ ನೆಡಲು ಆರಂಭಿಸಿದ ತಿಮ್ಮಕ್ಕಗೆ ಈಗ 106ವರ್ಷ ವಯಸ್ಸು ಎಂದು ಅವರು ತಿಳಿಸಿದರು.
ಈ ಸಂದರ್ಭ ತಿಮ್ಮಕ್ಕರ ಕುರಿತು ತಯಾರಿಸಿದ ವಿಶೇಷ ಗೀತೆಯನ್ನು ಅವರೇ ಲೋಕಾರ್ಪಣೆಗೊಳಿಸಿದರು. ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಕುಸುಮ ಕಾಮತ್, ತ್ರಿಶಾ ಕ್ಲಾಸಸ್ ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್, ಮಂಗಳೂರು ವಿವಿಯ ಸೆನೆಟ್ ಸದಸ್ಯ ಅಮೃತ್ ಶೆಣೈ ಅತಿಥಿಗಳಾಗಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಡೆಸಿಕೊಟ್ಟರು.







