ಜು.24: ನೀರಿಗಾಗಿ ಅರಣ್ಯ-2017
ಉಡುಪಿ, ಜು.22: ಕರ್ನಾಟಕ ಅರಣ್ಯ ಇಲಾಖೆ, ಕುಂದಾಪುರ ವಿಭಾಗ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಂಗಳೂರು ವಿವಿ ರಾಷ್ಟ್ರೀಯ ಸೇವಾ ಯೋಜನೆಗಳ ಸಂಯುಕ್ತ ಆಶ್ರಯದಲ್ಲಿ ನೀರಿಗಾಗಿ ಅರಣ್ಯ-2017 ಕಾರ್ಯಕ್ರಮ ಜು.24ರಂದು ಬೆಳಗ್ಗೆ 10:30ಕ್ಕೆ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯ ಅಟಲ್‌ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ರಾಜ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ. ರಮಾನಾಥ ರೈ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸುವರು.
ಇದರ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಪೆರಂಪಳ್ಳಿ ಜಂಕ್ಷನ್‌ನಿಂದ ಅರಣ್ಯದ ಮಹತ್ವ ಸಾರುವ ಟ್ಯಾಬ್ಲೋ ಹಾಗೂ ಮೆರವಣಿಗೆ ನಡೆಯಲಿದೆ. ಮಾನವ ಸರಪಳಿ ಅತಿಥಿಗಳಿಂದ ಸಾಂಕೇತಿಕ ಗಿಡ ನೆಡುವ ಕಾರ್ಯಕ್ರಮ, ಅರಣ್ಯ ಮತ್ತು ಪರಿಸರ ಇಲಾಖೆಯ ಅರಿವಿನ ಬಗ್ಗೆ ಪ್ರಹಸನ ಮತ್ತು ನೃತ್ಯ ಕಾರ್ಯಕ್ರಮಗಳು ಅಲ್ಲದೇ ವಾಜಪೇಯಿ ಸಭಾಂಗಣದಲ್ಲಿ ಮಕ್ಕಳಿಂದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ ಎಂದು ವಲಯ ಅರಣ್ಯಾಧಿಕಾರಿ ಕ್ಲಿಪರ್ಡ್ ಲೋಬೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





