ಶೀಲ ಶಂಕಿಸಿ ಪತ್ನಿಯ ಕೊಲೆ ಪ್ರಕರಣ: ಅಪರಾಧಿ ಪತಿಗೆ ಜೀವಾವಧಿ
ಮಂಗಳೂರು, ಜು.22: ಪತ್ನಿಯ ಶೀಲ ಶಂಕಿಸಿ ಆಕೆಯನ್ನು ಕತ್ತು ಹಿಸುಕಿ ಕೊಲೆಗೈದ ಅಪರಾಧಿ ಪತಿಗೆ ಮಂಗಳೂರಿನ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಾವೂರು ಬಳಿಯ ಗಾಂಧಿನಗರದಲ್ಲಿ ಮೂರು ವರ್ಷಗಳ ಹಿಂದೆ ಪತ್ನಿ ಮಂಜುಳಾ ಯಾನೆ ಅನ್ನಪೂರ್ಣ (28) ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ ಅಪರಾಧಿ ಪತಿ ಫಕೀರಯ್ಯ ಯಾನೆ ಪ್ರಕಾಶ್ (35) ಎಂಬಾತನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.
ಫಕೀರಯ್ಯ ಮತ್ತು ಮಂಜುಳಾ ಮೂಲತಃ ಕೊಪ್ಪಳ ಜಿಲ್ಲೆಯವರಾಗಿದ್ದು, ಕೂಲಿ ಕೆಲಸಕ್ಕಾಗಿ ಮಂಗಳೂರಿಗೆ ಬಂದು ಕಾವೂರು ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ವಿರೂಪಾಕ್ಷ (8) ಮತ್ತು ಭಾವನಾ (5) ಎಂಬ ಇಬ್ಬರು ಮಕ್ಕಳಿದ್ದು, ಅವರು ಕೊಪ್ಪಳದಲ್ಲಿ ಅಜ್ಜಿ ಮನೆಯಲ್ಲಿದ್ದು, ಶಾಲೆಗೆ ಹೋಗುತ್ತಿದ್ದಾರೆ. ಕೊಪ್ಪಳದಲ್ಲಿದ್ದಾಗ ಪತ್ನಿ ಮಂಜುಳಾ ಅವರಿಗೆ ಪರ ಪುರುಷನ ಜತೆ ಸಂಬಂಧವಿತ್ತು ಎಂದು ಫಕೀರಯ್ಯ ಸಂಶಯ ವ್ಯಕ್ತಪಡಿಸಿದ್ದ. ಇದೇ ವಿಷಯದಲ್ಲಿ ಇಬ್ಬರ ನಡುವೆ ಆಗಿಂದಾಗ ಜಗಳ ನಡೆಯುತ್ತಿತ್ತು. 2014 ಜು. 30 ರಂದು ರಾತ್ರಿ ಇಬ್ಬರೂ ಊಟ ಮಾಡಿ ಮಲಗಿದ್ದರು. ಪಕೀರಯ್ಯ ಅಂದು ಮದ್ಯ ಸೇವಿಸಿದ್ದು, ಮಧ್ಯ ರಾತ್ರಿ ವೇಳೆ ಪತ್ನಿ ಮಂಜುಳಾ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಮರುದಿನ ಮುಂಜಾನೆ ವೇಳೆ ಪರಾರಿಯಾಗಿದ್ದನು.
ಪಕ್ಕದ ಮನೆಯಲ್ಲಿ ವಾಸವಾಗಿರುವ ಮಂಜುಳಾ ಅವರ ಸಂಬಂಧಿ ನೀಲಂ ಅವರು ಬೆಳಗ್ಗೆ ಎದ್ದಾಗ ಮಂಜುಳಾ ಅವರ ಮನೆಯ ಮುಂಭಾಗದ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿರುವುದನ್ನು ಗಮನಿಸಿದ್ದರು. ಕೂಗಿ ಕರೆದಾಗ ಪ್ರತಿಸ್ಪಂದನ ಇರಲಿಲ್ಲ. ಸಂಶಯದಿಂದ ಬಾಗಿಲು ತೆರೆದು ನೋಡಿದಾಗ ಮಂಜುಳಾ ಅವರು ಕೊಲೆಯಾಗಿದ್ದರು.
ಕಾವೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪಕೀರಯ್ಯ ಅವರನ್ನು 2014 ಆಗಸ್ಟ್ 1 ರಂದು ಕೊಪ್ಪಳದಲ್ಲಿ ಬಂಧಿಸಿದ್ದರು. ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಲೋಕೇಶ್ ಅವರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಅವರು ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಪಕೀರಯ್ಯನಿಗೆ ಜೀವಾವಧಿ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದರೆ ಹೆಚ್ಚುವರಿಯಾಗಿ 3 ತಿಂಗಳ ಶಿಕ್ಷೆಯನ್ನು ಅನುಭವಿಸ ಬೇಕೆಂದು ತನ್ನ ತೀರ್ಪಿನಲ್ಲಿ ತಿಳಿಸಿದ್ದಾರೆ.
ತಂದೆಗೆ ಶಿಕ್ಷೆಯಾಗಿರುವ ಕಾರಣ ಮಕ್ಕಳಿಬ್ಬರು ಅನಾಥರಾಗಿದ್ದು, ಅವರಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸಲು ವ್ಯವಸ್ಥೆ ಮಾಡುವಂತೆ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.
ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ನಾರಾಯಣ ಶೇರಿಗಾರ್ ವಾದಿಸಿದ್ದರು. ಸಾಕ್ಷಿ ನುಡಿದ ಟ್ಯೂಶನ್ ಮಕ್ಕಳು ಪಕೀರಯ್ಯ ಪದವೀಧರನಾಗಿದ್ದ. ಕಾವೂರಿನಲ್ಲಿ ಕೂಲಿ ಕೆಲಸದ ಜತೆಗೆ ಸಂಜೆ ಹೊತು ಪಕ್ಕದ ಮನೆಯಲ್ಲಿರುವ ಸಂಬಂಧಿಕರಾದ ನೀಲಂ ಅವರ ಇಬ್ಬರು ಮಕ್ಕಳಿಗೆ ಟ್ಯೂಶನ್ ನೀಡುತ್ತಿದ್ದ. ಮಂಜುಳಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ಸಾಕ್ಷಿಗಳ ವಿಚಾರಣೆ ನಡೆಸಿದಾಗ ಈ ಮಕ್ಕಳು 2014 ಜು. 30 ರಂದು ರಾತ್ರಿ 9 ಗಂಟೆಯ ತನಕ ತಾವು ಪಕೀರಯ್ಯ ಅವರ ಮನೆಯಲ್ಲಿ ಟ್ಯೂಶನ್ ಪಡೆದಿದ್ದೆವು ಎಂದು ಸಾಕ್ಷಿ ನುಡಿದಿದ್ದಾರೆ.
ಪತ್ರ ಬರೆದಿಟ್ಟಿದ್ದ: ಪತ್ನಿಯನ್ನು ಕೊಲೆ ಮಾಡುವ ಮೊದಲು ಆರೋಪಿ ಫಕೀರಯ್ಯ ಪತ್ರವನ್ನು ಬರೆದಿಟ್ಟಿದ್ದ. ‘‘ಇಂದು ನಿನ್ನ ಸಾವು ನಿಶ್ಚಿತ. ಟುಡೇ ಈಸ್ ಯುವರ್ ಲಾಸ್ಟ್ ಡೇ’’ ಎಂಬುದಾಗಿ ಬರೆದಿದ್ದ. ಅದನ್ನು ಪೊಲೀಸರು ಮಹಜರು ಸಂದರ್ಭದಲ್ಲಿ ವಶಕ್ಕೆ ಪಡೆದು ಕೊಂಡಿದ್ದರು.







