ತಲೆಮರೆಸಿಕೊಂಡದ್ದ ಆರೋಪಿಯ ಬಂಧನ

ಪುತ್ತೂರು, ಜು. 22: ಪುತ್ತೂರು ತಾಲೂಕಿನ ಕೋಡಿಂಬಾಡಿ ಮಸೀದಿಯಲ್ಲಿ ಮೂರು ವರ್ಷಗಳ ಹಿಂದೆ ಮಸೀದಿಯ ಲೆಕ್ಕಪರಿಶೋಧಕನ ಮೇಲೆ ಹಲ್ಲೆ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಶನಿವಾರ ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಪುತ್ತೂರು ತಾಲೂಕಿನ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ನಿವಾಸಿ ಶೇಖಬ್ಬ ಎಂಬವರ ಪುತ್ರ, ಕೋಡಿಂಬಾಡಿ ಮಸೀದಿಯಲ್ಲಿ ಲೆಕ್ಕ ಪರಿಶೋಧಕರಾಗಿದ್ದ ಜಿ.ಎಸ್.ಹನೀಫ್ (42) ಎಂಬವರ ಮೇಲೆ 2014ರ ಸೆಪ್ಟೆಂಬರ್ 14 ರಂದು 8 ಮಂದಿಯ ತಂಡವೊಂದು ಹಲ್ಲೆ ನಡೆಸಿತ್ತು. ಈ ಪ್ರಕರಣದ 3ನೇ ಆರೋಪಿಯಾಗಿದ್ದ ಮಹಮ್ಮದ್ ನವಾಝ್ ವಿದೇಶಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದ. ಆರೋಪಿಯು ಶನಿವಾರ ಸ್ವದೇಶಕ್ಕೆ ಬರಲು ಬಜ್ಪೆ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬಂದು ಇಳಿಯುತ್ತಿದ್ದಂತೆ ಖಚಿತ ಮಾಹಿತಿಯ ಮೇರೆಗೆ ಪುತ್ತೂರು ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.
ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಕುಮಾರ್ ಮಾರ್ಗದರ್ಶನದಲ್ಲಿ ಎಸ್.ಐ ಒಮನಾ ಎಸ್.ಕೆ, ಪ್ರೊಬೆಷನರಿ ಎಸ್.ಐ ಮಂಜುನಾಥ್ ,ಹೆಡ್ ಕಾನ್‌ಸ್ಟೇಬಲ್‌ಗಳಾದ ಪರಮೇಶ್ವರ ಮತ್ತು ಜಯರಾಮ್ ಕೆ.ಎಸ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂಧಿತ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.





