ಶೇ.7ರಷ್ಟು ಬೃಹತ್ ಅಣೆಕಟ್ಟುಗಳಲ್ಲಿ ಮಾತ್ರ ತುರ್ತು ವಿಪತ್ತು ಕ್ರಿಯಾ ಯೋಜನೆ: ಸಿಎಜಿ

ಹೊಸದಿಲ್ಲಿ, ಜು.22: ಭಾರತದಲ್ಲಿರುವ 4,862 ಬೃಹತ್ ಅಣೆಕಟ್ಟುಗಳ ಪೈಕಿ ಕೇವಲ 349 ಅಣೆಕಟ್ಟುಗಳು ಮಾತ್ರ ತುರ್ತು ವಿಪತ್ತು ಕ್ರಿಯಾ ಯೋಜನೆಯನ್ನು ಹೊಂದಿವೆ ಎಂದು ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ತಿಳಿಸಲಾಗಿದೆ.
ದೇಶದ ಕೇವಲ ಶೇ.7ರಷ್ಟು ಅಣೆಕಟ್ಟುಗಳು ಮಾತ್ರ ತುರ್ತು ವಿಪತ್ತು ಕ್ರಿಯಾ ಯೋಜನೆಯನ್ನು ಹೊಂದಿವೆ. ಅಲ್ಲದೆ, 2016ರ ಮಾರ್ಚ್ ತಿಂಗಳಿನವರೆಗೆ ವಿಪತ್ತು ನಿರ್ವಹಣೆ ಕುರಿತ ಅಣಕು ಕಾರ್ಯಾಚರಣೆಯನ್ನು ಕೇವಲ ಒಂದು ಅಣೆಕಟ್ಟಿನಲ್ಲಿ ಮಾತ್ರ ನಡೆಸಲಾಗಿದೆ ಎಂದು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
17 ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು ಇದರಲ್ಲಿ ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ಮಾತ್ರ ಅಣೆಕಟ್ಟುಗಳನ್ನು ಮಳೆಗಾಲದ ಮೊದಲು ಹಾಗೂ ಮಳೆಗಾಲದ ಬಳಿಕದ ಪರಿಶೋಧನೆಗೆ ಒಳಪಡಿಸಿವೆ. ಮೂರು ರಾಜ್ಯಗಳು ಆಂಶಿಕ ಪರಿಶೋಧನೆ ನಡೆಸಿವೆ. 2010ರಲ್ಲಿ ಆರಂಭಿಸಿದ ಅಣೆಕಟ್ಟು ಸುರಕ್ಷಾ ಕಾನೂನುಗಳನ್ನು 2016ರ ಆಗಸ್ಟ್‌ವರೆಗೆ ಯಾವುದೇ ರಾಜ್ಯ ಜಾರಿಗೊಳಿಸಿಲ್ಲ. ಅಲ್ಲದೆ ಅಣೆಕಟ್ಟುಗಳ ನಿರ್ವಹಣೆಯ ಕುರಿತು ಸೂಕ್ತ ಯೋಜನೆ ರೂಪಿಸಲಾಗಿಲ್ಲ ಮತ್ತು ಇದಕ್ಕೆ ಅಗತ್ಯವಿರುವ ನಿಧಿಯನ್ನು ಒದಗಿಸಲಾಗಿಲ್ಲ ಎಂದು ವರದಿ ತಿಳಿಸಿದೆ.
ತಜ್ಞರು ನಡೆಸಿದ ಪರಿಶೋಧನೆ ಸಂದರ್ಭ ಐದು ಬೃಹತ್ ಅಣೆಕಟ್ಟುಗಳಲ್ಲಿ (ಬಿಹಾರ, ಉ.ಪ್ರದೇಶದಲ್ಲಿ ತಲಾ ಎರಡು, ಪ.ಬಂಗಾಲದಲ್ಲಿ ಒಂದು) ಕೆಲವು ಲೋಪ ಮತ್ತು ಕೊರತೆ ಕಂಡು ಬಂದಿದೆ. ಆದರೆ ನಿಧಿಯ ಕೊರತೆಯ ಕಾರಣ ಸೂಕ್ತ ಪರಿಹಾರ ಕಾರ್ಯ ನಡೆಸಲಾಗಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಭಾರತದ 329 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ 45.64 ಹೆಕ್ಟೇರ್ ಪ್ರದೇಶ ನೆರೆ ಹಾವಳಿಗೆ ತುತ್ತಾಗುವ ಪ್ರದೇಶದಲ್ಲಿದೆ. ಪ್ರತೀ ವರ್ಷ ಸರಾಸರಿ 7.55 ಮಿಲಿಯನ್ ಹೆಕ್ಟೇರ್ ಪ್ರದೇಶ ನೆರೆಹಾವಳಿಗೆ ಒಳಗಾಗುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.







