ಉಡುಪಿ ಮಲಬಾರ್ ಗೋಲ್ಡ್ ನಿಂದ ಮನೆ ನಿರ್ಮಾಣಕ್ಕೆ ನೆರವು

ಉಡುಪಿ, ಜು.23: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಸಿಎಸ್‌ಆರ್ ಚಟುವಟಿಕೆಯ ಅಂಗವಾಗಿ ಉಡುಪಿ ಶಾಖೆಯ ಹೌಸಿಂಗ್ ಚಾರಿಟಿ ವಿಭಾಗದಿಂದ ಮನೆ ನಿರ್ಮಾಣಕ್ಕಾಗಿ ಜಿಲ್ಲೆಯ ಆರು ಕುಟುಂಬಗಳಿಗೆ ಪ್ರಥಮ ಹಂತದಲ್ಲಿ ತಲಾ 50 ಸಾವಿರ ರೂ. ಸಹಾಯಧನದ ಚೆಕ್‌ಗಳನ್ನು ಇಂದು ವಿತರಿಸಲಾಯಿತು.
ಉಡುಪಿಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಂನಲ್ಲಿ ನಡೆದ ಕಾರ್ಯಕರ್ಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸಾಲು ಮರ ತಿಮ್ಮಕ್ಕ ಫಲಾನುಭವಿಗಳಿಗೆ ಚೆಕ್ ವಿತರಿಸಿದರು.
ಬಳಿಕ ನಳಿನಿ ಪ್ರದೀಪ್ ರಾವ್ ಮಾತನಾಡಿ, ಇದು ಸಾಮಾಜಿಕ ಅಭಿವೃದ್ಧಿಗೆ ಪೂರಕ ವಾದ ಯೋಜನೆಯಾಗಿದೆ. ಬಡತನದಿಂದ ಅನೇಕರು ಸ್ವಂತ ಮನೆ ಇಲ್ಲದೆ ಬದುಕುತ್ತಿದ್ದಾರೆ. ಅಂತಹವರಿಗೆ ಈ ಸಂಸ್ಥೆ ನೆರವು ಕಲ್ಪಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಲು ಮರ ತಿಮ್ಮಕ್ಕ ಅವರನ್ನು ಗೌರವಿಸಲಾಯಿತು. ಗಿಡ ಮರಗಳನ್ನು ಬೆಳೆಸುವುದು ಬಹಳ ದೊಡ್ಡ ಪುಣ್ಯದ ಕೆಲಸವಾಗಿದೆ. ಅವು ಗಳನ್ನು ನಿಮ್ಮ ಮಕ್ಕಳಂತೆ ಪೋಷಿಸಿ. ಇದರಿಂದ ಇಡೀ ನಾಡಿಗೆ ಒಳ್ಳೆಯದಾಗುತ್ತದೆ ಎಂದು ಅವರು ತಿಳಿಸಿದರು.
ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ನ ಶಾಖಾ ಮುಖ್ಯಸ್ಥ ಹಫೀಝ್ ರಹ್ಮಾನ್ ಮಾತನಾಡಿ, ಮಲಬಾರ್ ಗ್ರೂಪ್ ಸಿಎಸ್‌ಆರ್ ಚಟು ವಟಿಕೆಗಳಿಗೆ ತನ್ನ ಲಾಭಾಂಶದ ಶೇ. 5ನ್ನು ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ವಸತಿಹೀನರಿಗೆ ವಸತಿ ಮತ್ತು ಪರಿಸರ ಸಂರಕ್ಷಣೆಗಾಗಿ ಮೀಸಲು ಇಟ್ಟಿದ್ದು, ದೇಶದಲ್ಲಿ 11,000 ಮನೆಗಳಿಗೆ 29 ಕೋಟಿ ರೂ. ಹಣಕಾಸಿನ ನೆರವು ನೀಡಲಾಗಿದೆ. ಈ ಮಳೆಗಾಲದಲ್ಲಿ ಜಿಲ್ಲೆಯಾದ್ಯಂತ 2,300 ಗಿಡಗಳನ್ನು ನೆಡಲಾಗಿದೆ ಎಂದರು.
ಉಡುಪಿ ನಗರಸಭಾ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವ ಮಾತನಾಡಿದರು. 500 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟ ಪುಟಾಣಿ ರೋನನ್ ಲುವಿಸ್ ಹಾಗೂ ಹಿರಿಯ ಅಥ್ಲೆಟಿಕ್ ಜ್ಯೋತಿ ಉದಯ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನಗರ ಸಭೆ ಸದಸ್ಯರಾದ ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಯುವರಾಜ್, ಎಲ್ಲೂರು ಗ್ರಾಪಂ ಅಧ್ಯಕ್ಷೆ ವಸಂತಿ ಮದ್ವರಾಜ್ ಉಪಸ್ಥಿತರಿದ್ದರು.
ಮಲಬಾರ್ ಗೋಲ್ಡ್ ಸಿಬ್ಬಂದಿ ರಾಘವೇಂದ್ರ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹೌಸಿಂಗ್ ಚಾರಿಟಿ ಬಗ್ಗೆ ನವಚೇತನ್ ಹಾಗೂ ಸಾಲು ಮರದ ತಿಮ್ಮಕ್ಕರನ್ನು ತಂಝಿಮ್ ಪರಿಚಯಿಸಿದರು.







