ಬಂಧನದ ಸಂದರ್ಭ ಜನರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸಿ: ಸರಕಾರಗಳಿಗೆ ದಿಲ್ಲಿ ಹೈಕೋರ್ಟ್‌ನ ತಾಕೀತು
ಹೊಸದಿಲ್ಲಿ,ಜು.23: ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಬಂಧಿಸುವ ಅಥವಾ ವಶಕ್ಕೆ ತೆಗೆದುಕೊಳ್ಳುವ ಸಂದರ್ಭ ತಮಗಿರುವ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಜಾಗ್ರತಿ ಅಭಿಯಾನವೊಂದನ್ನು ಕೈಗೊಳ್ಳುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಕೇಂದ್ರ ಮತ್ತು ದಿಲ್ಲಿಯ ಆಪ್ ಸರಕಾರಗಳಿಗೆ ನಿರ್ದೇಶ ನೀಡಿದೆ.
ಜಾಮೀನು ರಹಿತ ಅಥವಾ ಸಂಜ್ಞೇಯ ಅಪರಾಧ ಪ್ರಕರಣಗಳಲ್ಲಿಯೂ ಪೊಲೀಸರು ಜನರನ್ನು ಏಕಾಏಕಿ ಬಂಧಿಸುವಂತಿಲ್ಲ ಅಥವಾ ವಶಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹಿಂದೆ ತೀರ್ಪುಗಳನ್ನು ನೀಡಿದೆ ಎಂದು ಹೇಳಿದ ಪ್ರಭಾರ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾ.ಸಿ.ಹರಿಶಂಕರ ಅವರ ಪೀಠವು, ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ 2008,ಅಕ್ಟೋಬರ್‌ನಲ್ಲಿ ದಿಲ್ಲಿ ಪೊಲೀಸ್ ಇಲಾಖೆ ಕೂಡ ಈ ಸಂಬಧ ಸ್ಥಾಯಿ ಆದೇಶಗಳನ್ನು ಹೊರಡಿಸಿದೆ. ಆದರೆ ಬಂಧನದ ಸಂದರ್ಭ ತಮ್ಮ ಹಕ್ಕುಗಳ ಬಗ್ಗೆ ಜನರಿಗೆ ತಿಳಿದಿಲ್ಲವೆಂಬಂತೆ ಕಂಡು ಬರುತ್ತಿದೆ ಎಂದು ಬೆಟ್ಟು ಮಾಡಿತು.
ಬಂಧನಕ್ಕೆ ಮಾರ್ಗಸೂಚಿಗಳನ್ನು ನಿಗದಿಗೊಳಿಸಿರುವ ದಿಲ್ಲಿ ಪೊಲೀಸ್‌ನ ಸ್ಥಾಯಿ ಆದೇಶದ ಕುರಿತು ಜನರಿಗೆ ಮಾಹಿತಿ ಒದಗಿಸಲು ಪ್ರತಿವಾದಿಗಳು(ಕೇಂದ್ರ ಮತ್ತು ದಿಲ್ಲಿ ಸರಕಾರ) ಕ್ರಮಗಳನ್ನು ಕೈಗೊಳ್ಳಬೇಕು. ಇದನ್ನು ಸ್ಥಳೀಯ ಭಾಷೆಗಳಲ್ಲಿ ಪ್ರಕಟಿಸಬೇಕು ಮತ್ತು ಸಾರ್ವಜನಿಕರಿಗೆ ವಿತರಿಸಬೇಕು. ಬಂಧಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಇದರ ಪ್ರತಿಯನ್ನು ಒದಗಿಸಬೇಕು ಎಂದು ಆದೇಶಿಸಿದ ಪೀಠವು, ಇದಕ್ಕಾಗಿ ನಾಲ್ಕು ವಾರಗಳ ಗಡುವು ವಿಧಿಸಿತು.
ತಮ್ಮ ಹಕ್ಕುಗಳ ಬಗ್ಗೆ ಪ್ರಜೆಗಳ ಅಮಾಯಕತೆಯ ದುರ್ಲಾಭವನ್ನು ಪಡೆಯುವ ಮೂಲಕ ಸರಕಾರಗಳು ಸಂವಿಧಾನದ 22(2)ವಿಧಿಯನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿ ಸುಭಾಷ್ ವಿಜಯರಾನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ದೂರಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಈ ನಿರ್ದೇಶವನ್ನು ನೀಡಿದೆ.
ಈ ವಿಧಿ ಮತ್ತು ಐಪಿಸಿಯ ಕಲಂ 57ರಂತೆ ಆರೋಪಿಯನ್ನು, ಪ್ರಯಾಣದ ಅವಧಿಯನ್ನು ಹೊರತು ಪಡಿಸಿ, ಬಂಧಿಸಿದ 24 ಗಂಟೆಗಳಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕು. ನ್ಯಾಯಾಧೀಶರು ಅನುಮತಿ ನೀಡಿದರೆ ಮಾತ್ರ ಆರೋಪಿ ಯನ್ನು 24 ಗಂಟೆಗೂ ಹೆಚ್ಚಿನ ಅವಧಿಗೆ ಬಂಧನದಲ್ಲಿರಿಸಬಹುದು ಎಂದು ಅರ್ಜಿಯಲ್ಲಿ ಗಮನ ಸೆಳೆಯಲಾಗಿತ್ತು.
ಜಾಮೀನು ರಹಿತ ಅಥವಾ ಸಂಜ್ಞೇಯ ಅಪರಾಧವೆಂಬ ಮಾತ್ರಕ್ಕೆ ಆರೋಪಿಯನ್ನು ಬಂಧಿಸಬಾರದು. ಆರೋಪದ ಸತ್ಯಾಸತ್ಯತೆಯನ್ನು ತನಿಖೆಯಿಂದ ಖಚಿತಪಡಿಸಿಕೊಂಡ ಬಳಿಕವೇ ಆತನನ್ನು ಬಂಧಿಸಬೇಕು ಎಂದು ಈ ಹಿಂದೆ ಸ್ಪಷ್ಟಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಅದಕ್ಕಾಗಿ ಕೆಲವು ಮಾರ್ಗಸೂಚಿಗಳನ್ನೂ ನಿಗದಿಗೊಳಿಸಿತ್ತು.













