ದ.ಕ. ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ಸಭೆ

ಮಂಗಳೂರು, ಜು.23: ದ.ಕ. ಜಿಲ್ಲಾ ಕಾಂಗ್ರೆಸ್ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ವತಿಯಿಂದ ಜಿಲ್ಲಾ ಕಾಂಗ್ರೆಸ್ ವಕೀಲರ ಸಭೆಯು ಕಾನೂನು ವಿಭಾಗದ ಜಿಲ್ಲಾ ಅಧ್ಯಕ್ಷ ಎ.ಸಿ. ವಿನಯರಾಜ್‌ರ ನೇತೃತ್ವದಲ್ಲಿ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ದ.ಕ.ಜಿಲ್ಲೆಯ ಕೋಮುಸಾಮರಸ್ಯವನ್ನು ಬಿಜೆಪಿ ಪಕ್ಷ ಮತ್ತು ಸಂಘ ಪರಿವಾರಗಳು ಕೆಡಿಸುತ್ತಿದ್ದು, ಇದು ಜಿಲ್ಲೆಯ ಜನರ ಶಾಂತಿಯುತ ಜೀವನಕ್ಕೆ ಧಕ್ಕೆಯನ್ನುಂಟು ಮಾಡುತ್ತಿದೆ. ಈ ರೀತಿ ಮುಂದುವರಿದಲ್ಲಿ ಈ ಜಿಲ್ಲೆಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾರಕವಾಗಲಿದೆ. ಕೆಲವು ಸಮಾಜಘಾತುಕ ಶಕ್ತಿಗಳು ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದನೆ ಮಾಡುತ್ತಾ ಜಿಲ್ಲೆಯನ್ನು ಮತೀಯವಾದದ ಕೇಂದ್ರವನ್ನಾಗಿಸಿ ಮಾನವರ ಮಧ್ಯೆ ಜಗಳ ಸೃಷ್ಟಿಸಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ಹಾಗಾಗಿ ವಕೀಲರು ಸಮಾಜ ಮತ್ತು ದೇಶದ ರಕ್ಷಣೆ ಮಾಡುವಲ್ಲಿ ಮಹತ್ವದ ಹೆಜ್ಜೆ ಇಡಬೇಕೆಂದು ಕರೆ ನೀಡಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮಾತನಾಡಿ, ವಕೀಲರು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಹಂಗಾಮಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಕಾನೂನು ವಿಭಾಗದ ಹಿರಿಯ ಮಾರ್ಗದರ್ಶಕ ಸಮಿತಿ ಸದಸ್ಯರಾದ ಬಿ. ಇಬ್ರಾಹೀಂ, ಟಿ. ನಾರಾಯಣ ಪೂಜಾರಿ, ವಸಂತ ಕಾರಂದೂರು, ಅಬ್ದುಲ್ ಅಝೀಝ್, ಹನೀಫ್, ಕಾನೂನು ವಿಭಾಗದ ವಿಧಾನಸಭಾ ಅಧ್ಯಕ್ಷರಾದ ವೈ. ರಾಧಾಕೃಷ್ಣ ಭಟ್, ಹರೀಶ್ ಮೂಡುಬಿದಿರೆ, ಫಝಲ್ ರಹೀಂ, ಫವಾಝ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ನಿರೂಪಿಸಿದರು. ಪುತ್ತೂರು ಕಾನೂನು ವಿಭಾಗದ ಅಧ್ಯಕ್ಷ ದುರ್ಗಪ್ರಸಾದ್ ರೈ ವಂದಿಸಿದರು







