ವಿದ್ಯಾರ್ಥಿ ನಿಲಯಗಳಿಗೆ ಲೋಕಾಯುಕ್ತರಿಂದ ಧಿಡೀರ್ ಭೇಟಿ
ಕಂಪ್ಯೂಟರ್ ಶಿಕ್ಷಣ, ಕ್ರೀಡೆಗೆ ಆದ್ಯತೆ ನೀಡಲು ನ್ಯಾ.ವಿಶ್ವನಾಥ್ ಶೆಟ್ಟಿ ಸೂಚನೆ

ಉಡುಪಿ, ಜುಲೈ 23: ಕರ್ನಾಟಕ ಲೋಕಾಯುಕ್ತ ನ್ಯಾಯಾಮೂರ್ತಿ ಕೆ. ವಿಶ್ವನಾಥ್ ಶೆಟ್ಟಿ ರವಿವಾರ ಉಡುಪಿ ಹಾಗೂ ಬ್ರಹ್ಮಾವರದ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆಯ ಬನ್ನಂಜೆ ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಆರೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ, ಐಟಿಡಿಪಿ ಇಲಾಖೆಯ ಬನ್ನಂಜೆ ಆಶ್ರಮ ಶಾಲೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬನ್ನಂಜೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಬ್ರಹ್ಮಾವರ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದರು.
ವಿದ್ಯಾರ್ಥಿ ನಿಲಯದಲ್ಲಿನ ಸ್ವಚ್ಛತೆ, ಊಟದ ವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದ ಲೋಕಾಯುಕ್ತರು, ನಿಲಯದ ವಿದ್ಯಾರ್ಥಿ ಗಳೊಂದಿಗೆ ಶಿಕ್ಷಣದ ಬಗ್ಗೆ ಆರೋಗ್ಯದ ಬಗ್ಗೆ ವಿಚಾರಿಸಿದರು. ನಿಲಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡುವುದರ ಜೊತೆಗೆ ನಿಲಯಗಳಲ್ಲಿ ಕಂಪ್ಯೂಟರ್ ಖರೀದಿಸಿ ಅಳವಡಿಸುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬ್ರಹ್ಮಾವರ ವಿದ್ಯಾರ್ಥಿ ನಿಲಯದ ಆವರಣದ ಖಾಲಿ ಜಾಗದಲ್ಲಿ ಹೂವಿನ ಗಿಡಗಳು, ತರಕಾರಿ ಗಿಡಗಳನ್ನು ಬೆಳೆಸಿದ್ದು, ಇದೇ ರೀತಿ ಉಳಿದ ವಿದ್ಯಾರ್ಥಿ ನಿಲಯ/ವಸತಿ ಶಾಲೆಗಳಲ್ಲೂ ಕೈತೋಟ ನಿರ್ಮಾಣ ಮಾಡುವಂತೆ ಅವರು ತಿಳಿಸಿದರು. ಆರೂರು ವಸತಿ ಶಾಲೆಯಲ್ಲಿ ಸಾಕಷ್ಟು ಜಾಗ ಇರುವುದರಿಂದ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳಾದ ಟೆನ್ನಿಸ್, ಬಾಸ್ಕೆಟ್ ಬಾಲ್ ಮುಂತಾದ ಆಟಗಳನ್ನು ಆಡಲು ವ್ಯವಸ್ಥೆ ಮಾಡಬೇಕೆಂದು ಲೋಕಾಯುಕ್ತರು ಹೇಳಿದರು.
ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಿರುವ ಸೌಕರ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಲೋಕಾ ಯುಕ್ತರು, ಈಗ ಅನಿರೀಕ್ಷಿತವಾಗಿ ಕೆಲವು ಹಾಸ್ಟೆಲ್‌ಗಳಿಗೆ ಮಾತ್ರ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೂ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹರೀಶ್ ಗಾವಂಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.







