‘ಮುಕ್ತ ವಾತಾವರಣದಿಂದ ಮಕ್ಕಳ ಮಾನಸಿಕ ವಿಕಸನ ಸಾಧ್ಯ’

ಮಣಿಪಾಲ, ಜು.23: ಬಾಲ್ಯಾವಸ್ಥೆಯಲ್ಲಿರುವ ಮಕ್ಕಳನ್ನು ಸ್ವತಂತ್ರವಾಗಿ ಅವರ ಪಾಡಿಗೆ ಬಿಟ್ಟಲ್ಲಿ ಅವರ ಮಾನಸಿಕ ವಿಕಸನ ವೇಗವಾಗಿ ಬೆಳೆದು ಬುದ್ಧಿ ಮತ್ತೆ ತೀಕ್ಷ್ಣವಾಗುತ್ತದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲಿಸ್ ಹೇಳಿದ್ದಾರೆ.
ಮಣಿಪಾಲದ ಈಶ್ವರ ನಗರದ ಆದರ್ಶನಗರ ಅಂಗನವಾಡಿಯಲ್ಲಿ ಇತ್ತೀಚೆಗೆ ನಡೆದ ಬಾಲವಿಕಾಸ ಸಮಿತಿ ಸಭೆ ಮತ್ತು ಬಾಲ್ಯಾವಸ್ಥೆಯ ಪಾಲನೆ ಮತ್ತು ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಸೇವಾ ಗುಣಮಟ್ಟದ ಪರಿಶೀಲನೆ ನಡೆಸಿ ಕುಂದುಕೊರತೆಗಳು ಕಂಡು ಬಂದಲ್ಲಿ ಕ್ಷಿಪ್ರವಾಗಿ ಕ್ರಮ ಕೈಗೊಳ್ಳಲಾಗುವುದು. ಮಾದರಿ ಅಂಗನವಾಡಿಗಳ ಸೇವಾ ವಿಧಾನವನ್ನು ಇತರ ಅಂಗನವಾಡಿಗಳಿಗೂ ಅಳವಡಿಸಿಕೊಳ್ಳಲು ಸೂಚಿಸಲಾಗುವುದು ಎಂದರು.
ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ವೀಣಾ ವಿವೇಕಾನಂದ, ಅಂಗನ ವಾಡಿ ಕಾರ್ಯಕರ್ತೆ ಲಲಿತಾ ಎನ್., ಬಾಲವಿಕಾಸ ಸಮಿತಿಯ ಸುಬ್ರಹ್ಮಣ್ಯ ಪೈ, ಈಶ್ವರನಗರ ಸ್ನೇಹ ಸಂಗಮದ ಅಧ್ಯಕ್ಷ ಹರೀಶ್ ಜಿ.ಕಲ್ಮಾಡಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಪ್ರಕಾಶ್ ಪಾಟೀಲ್ ಮೊದ ಲಾದವರು ಉಪಸ್ಥಿತರಿದ್ದರು. ಬಾಲವಿಕಾಸ ಸಮಿತಿಯ ಕಾರ್ಯದರ್ಶಿ ಸತೀಶ್ ಎನ್. ವಂದಿಸಿದರು.





