ಆರ್ಥಿಕ ಸಬಲರಾಗದೆ ದಲಿತರು ರಾಜಕೀಯ ಅಧಿಕಾರ ಸಿಗದು: ಮುಜಾಫರ್ ಅಸಾದಿ
ಬೆಂಗಳೂರು, ಜು.23: ದಲಿತ ಸಮುದಾಯ ಆರ್ಥಿಕವಾಗಿ ಸದೃಢರಾದಾಗ ಮಾತ್ರ ರಾಜಕೀಯ ಅಧಿಕಾರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹಿರಿಯ ರಾಜಕೀಯ ಚಿತಂಕ ಮುಜಾಫರ್ ಅಸಾದಿ ಅಭಿಪ್ರಾಯಿಸಿದ್ದಾರೆ.
ರವಿವಾರ ನಗರದ ಜಿಕೆವಿಕೆಯಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮಾವೇಶದ ಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ ಬಂದು 70 ವರ್ಷಗಳು ಕಳೆದರೂ ದಲಿತನೊಬ್ಬ ಬಂಡವಾಳಶಾಹಿಯಾಗಿ ರೂಪಗೊಳ್ಳಲು ಸಾಧ್ಯವಾಗಿಲ್ಲ. ಈ ವಿಚಾರವನ್ನು ಸರಿಯಾಗಿ ಅವಲೋಕಿಸಿದರೆ ದೇಶದಲ್ಲಿ ಸಾಮಾಜಿಕ ನ್ಯಾಯ ಎಷ್ಟರ ಮಟ್ಟಿಗಿದೆ ಎಂಬುದು ಅರಿಯಬಹುದು ಎಂದು ತಿಳಿಸಿದರು.
ದೇಶದಲ್ಲಿ ಮೀಸಲಾತಿ ಹಾಗೂ ಭೂ ಸುಧಾರಣೆ ಸಮಾನವಾಗಿ ಸಾಗಿ ಬಂದಿಲ್ಲ. ಭೂ ಸುಧಾರಣೆ ಹೆಸರಿನಲ್ಲಿ ದಲಿತರಿಗೆ ಸಿಕ್ಕ ಮೂರು ಗುಂಟೆ, ನಾಲ್ಕು ಗುಂಟೆ ಜಾಗವನ್ನೇ ದೊಡ ಸಾಧನೆಯೆಂದು ಬಿಂಬಿಸುತ್ತಾ ಬರಲಾಗಿದೆ. ಕೇವಲ ಮೂರು ಗುಂಟೆ ಪಡೆದ ದಲಿತ ವ್ಯಕ್ತಿ ಭೂ ಒಡೆಯನಾಗಬಹುದು. ಆದರೆ, ಆರ್ಥಿಕವಾಗಿ ಸಬಲನಾಗಲು ಸಾಧ್ಯವೇ ಎಂಬುದು ಮೇಲ್ವರ್ಗದ ಚಿಂತಕರಿಗೆ ಮುಖ್ಯಪ್ರಶ್ನೆಯೇ ಆಗಲಿಲ್ಲವೆಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
ವ್ಯಾಪಾರದಲ್ಲಿ ದಲಿತರನ್ನು ಎಲ್ಲಿಯೂ ಕಾಣಿಸಿಕೊಳ್ಳದಂತೆ ವ್ಯವಸ್ಥಿತಿವಾಗಿ ಮಾಡಲಾಗಿದೆ. ದೇಶ ಹಾಗೂ ರಾಜ್ಯದ ಪ್ರಮುಖ ನಗರಗಳಲ್ಲಿ ದಲಿತ ಸಮುದಾಯದಕ್ಕೆ ಸೇರಿದ ಅಂಗಡಿಗಳು ಇಂದಿಗೂ ಕಾಣ ಸಿಗುವುದಿಲ್ಲ. ದಲಿತರು ವ್ಯವಹಾರಕ್ಕೆ ತರುವ ನಿಟ್ಟಿನಲ್ಲಿ ಸರಕಾರದ ನೀತಿಯೂ ಇಲ್ಲ. ಇವೆಲ್ಲಾ ಗಮನದಲ್ಲಿಟ್ಟು ದಲಿತರು ಸಮುದಾಯ ಆರ್ಥಿಕವಾಗಿ ಶ್ರೀಮಂತರಾಗುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ನಡೆಸಬೇಕು ಎಂದು ಅವರು ಹೇಳಿದರು.
ಹಿರಿಯ ಸಂಶೋಧಕ ಚಿನ್ನಸ್ವಾಮಿ ಸೋಸಲೆ ಮಾತನಾಡಿ, ಭಾರತಕ್ಕೆ ವಲಸೆ ಬಂದ ಆರ್ಯರು ಅಸಮಾನತೆಯ ಬೀಜವನ್ನು ಬಿತ್ತಲು ಯಶಸ್ವಿಯಾದರು. ದೇವರ ಹೆಸರಿನಲ್ಲಿ ಇಲ್ಲಿನ ಮೂಲ ನಿವಾಸಿಗಳನ್ನು ವಿಭಜಿಸಿ ಅಧಿಕಾರವನ್ನು ತಮ್ಮ ವಶಕ್ಕೆ ಪಡೆದರು. ಅವರ ಈ ಕುತಂತ್ರ ಬುದ್ದಿಯಿಂದಾಗಿ ಬ್ರಿಟಿಷರು ದೇಶವನ್ನು ಸುಲಭವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.
ದೇಶದಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ,ದೇಶದ ನೀತಿಗಳನ್ನು ರೂಪಿಸುವಂತವರು ಮಾತ್ರ ವೈದಿಕರಾಗಿದ್ದಾರೆ. ಇದರಿಂದಾಗಿ ಸ್ವಾತಂತ್ರ ನಂತರದಲ್ಲಿ ದೇಶದ ಬಹುಸಂಖ್ಯಾತರಾಗಿರುವ ಅಹಿಂದ ವರ್ಗ ಮೂಲಭೂತ ಹಕ್ಕುಗಳಿಗಾಗಿ ಇಂದಿಗೂ ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ವಿಷಾಧಿಸಿದರು. ಚಿಂತಕ ಎನ್.ಎಸ್.ಶಂಕರ್ ಉಪಸ್ಥಿತರಿದ್ದರು.







