ರಾಜ್ಯಕ್ಕೆ ಪ್ರತ್ಯೇಕ ಧ್ವಜ ತಪ್ಪೇನಿಲ್ಲ: ಶಶಿ ತರೂರ್

ಬೆಂಗಳೂರು, ಜು. 23: ಕರ್ನಾಟಕ ತನ್ನದೆ ಪ್ರತ್ಯೇಕ ಧ್ವಜ ಅಳವಡಿಸಿಕೊಳ್ಳುವುದು ತಪ್ಪೇನಿಲ್ಲ. ಇದರಿಂದ ರಾಷ್ಟ್ರೀಯತೆಗೆ ಯಾವುದೇ ರೀತಿಯ ದಕ್ಕೆ ಆಗುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಇಂದಲ್ಲಿ ಹೇಳಿದ್ದಾರೆ.
ರವಿವಾರ ಇಲ್ಲಿನ ಜಿಕೆವಿಕೆ ಆವರಣದಲ್ಲಿ ಏರ್ಪಡಿಸಿರುವ ಡಾ.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜ ಅತಿ ಎತ್ತರದಲ್ಲಿ ಹಾರಾಡುವಂತಿರಬೇಕು. ಅದಕ್ಕಿಂತ ಕೆಳಗಡೆ ರಾಜ್ಯದ ಧ್ವಜ ಹಾರಾಡಿಸುವುದರಲ್ಲಿ ತಪ್ಪೇನಿಲ್ಲ ಎಂದರು.
ರಾಷ್ಟ್ರಕ್ಕೆ ಒಂದೇ ಧ್ವಜ. ಆದರೂ, ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕ ಧ್ವಜ ಅಳವಡಿಸಿಕೊಂಡಿದೆ. ಅಮೆರಿಕಾ ದೇಶದಲ್ಲಿರುವ 50 ರಾಜ್ಯಗಳೂ ಪ್ರತ್ಯೇಕ ಧ್ವಜಗಳನ್ನು ಅಳವಡಿಸಿಕೊಂಡಿವೆ. ಅಲ್ಲಿ ಯಾವುದೇ ಸಮಸ್ಯೆ ಇಲ್ಲ. ಹೀಗಿರುವಾಗ ನಮ್ಮಲ್ಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸುವ ಅಗತ್ಯವೇನು ಎಂದು ಬಿಜೆಪಿ ಮುಖಂಡರನ್ನು ಪ್ರಶ್ನಿಸಿದರು.
ಹೇರಿಕೆ ಸಲ್ಲ: ದೇಶದಲ್ಲಿ ರಾಷ್ಟ್ರಭಾಷೆ ಹಿಂದಿ. ಅದಕ್ಕೆ ಉತ್ತೇಜನ ನೀಡಬೇಕಾದ್ದು ಕೇಂದ್ರದ ಕರ್ತವ್ಯ. ಆದರೆ, ದಕ್ಷಿಣ ರಾಜ್ಯಗಳಲ್ಲಿ ಹಿಂದಿ ಕಲಿಕೆಗೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹೀಗಾಗಿ ಯಾವುದೇ ಒಂದು ಭಾಷೆಯನ್ನು ಹೇರಿಕೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಹಿಂದಿ ರಾಷ್ಟ್ರ ಭಾಷೆಯಾದರೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ. ಇಂಗ್ಲಿಷ್ ರಾಷ್ಟ್ರ ಮಟ್ಟದಲ್ಲಿ ಸಂಪರ್ಕ ಭಾಷೆಯಾಗಿ ಬಳಸಬಹುದು ಎಂದ ಅವರು, ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆ. ಆ ಭಾಷೆಯಲ್ಲಿ ಶಿಕ್ಷಣ ನೀಡುವುದಕ್ಕೆ ಸರಕಾರದ ನಿರ್ಧಾರ ಸ್ವಾಗತಾರ್ಹ ಎಂದರು.
‘ತನ್ನ ಪತ್ನಿ ಸುನಂದಾ ಪುಷ್ಕರ್ ಅವರ ನಿಗೂಢ ಸಾವಿನ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ತನಿಖೆಯಲ್ಲಿ ತಾನು ಯಾವುದೇ ಸಂದರ್ಭದಲ್ಲಿಯೂ ಹಸ್ತಕ್ಷೇಪ ಮಾಡುವುದಿಲ್ಲ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’
-ಶಶಿ ತರೂರ್, ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ







