ಹಾರಂಗಿ ಭರ್ತಿ: ನದಿಗೆ ನೀರು ಹರಿವು

ಮಡಿಕೇರಿ, ಜು.23: ಹಾರಂಗಿ ಜಲಾಶಯ ಬಹುತೇಕ ಭರ್ತಿಗೊಂಡಿದ್ದು, ಹೆಚ್ಚುವರಿ ನೀರನ್ನು ಭಾನುವಾರ ನದಿಗೆ ಹರಿಸಲಾಗಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯುತ್ತಿದ್ದು, ಅಣೆಕಟ್ಟೆಗೆ 5600 ಕ್ಯೂಸೆಕ್ ಪ್ರಮಾಣದ ನೀರು ಹರಿದುಬರುತ್ತಿದೆ. ಜಲಾಶಯದ ಭದ್ರತೆಯ ನಿಟ್ಟಿನಲ್ಲಿ ಅಣೆಕಟ್ಟಿನ 4 ಕ್ರೆಸ್ಟ್‌ಗೇಟ್‌ಗಳ ಮೂಲಕ ನದಿಗೆ 1200 ಕ್ಯೂಸೆಕ್ ಪ್ರಮಾಣದ ನೀರು ಹರಿಸಲಾಗಿದೆ ಎಂದು ಅಣೆಕಟ್ಟು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 2859 ಅಡಿಗಳಾಗಿದ್ದು, ಅಣೆಕಟ್ಟೆಯಲ್ಲಿ 2857.21 ಅಡಿಗಳಷ್ಟು ನೀರಿನ ಮಟ್ಟ ಕಾಯ್ದುಕೊಂಡು ಹೆಚ್ಚುವರಿ ನೀರನ್ನು ಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹಾರಂಗಿ ಅಣೆಕಟ್ಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.
ನೀರು ಬಿಡುವ ಮುನ್ನ ಅಧಿಕಾರಿಗಳು, ಸಿಬ್ಬಂದಿಗಳು ಕ್ರೆಸ್ಟ್‌ಗೇಟ್‌ಗಳಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭ ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಎಂ.ಎನ್.ಚಂದ್ರಕುಮಾರ್, ಅಣೆಕಟ್ಟು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಧರ್ಮರಾಜು, ಸಹಾಯಕ ಅಭಿಯಂತರ ನಾಗರಾಜ್ ಮತ್ತಿತರರು ಹಾಜರಿದ್ದರು.





