3 ವರ್ಷಗಳಲ್ಲಿ 71,941 ಕೋಟಿ ರೂ. ಅಘೋಷಿತ ಆದಾಯ ಪತ್ತೆ
ಸುಪ್ರೀಂಕೋರ್ಟ್‌ಗೆ ಸರಕಾರದ ಪ್ರಮಾಣಪತ್ರ

ಹೊಸದಿಲ್ಲಿ, ಜು.23: ಆದಾಯ ತೆರಿಗೆ ಇಲಾಖೆ(ಐಟಿ) ಕಳೆದ ಮೂರು ವರ್ಷಗಳಿಂದ ನಡೆಸಿದ ಭಾರೀ ಶೋಧ , ಪರಿಶೀಲನೆ ಮತ್ತು ಜಪ್ತಿ ಕಾರ್ಯಾಚರಣೆಯಿಂದ ಸುಮಾರು 71,941 ಕೋಟಿ ರೂ. ಮೊತ್ತದ ‘ಅಘೋಷಿತ ಆದಾಯ’ವನ್ನು ಪತ್ತೆಹಚ್ಚಲಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಕಳೆದ ವರ್ಷದ ನವೆಂಬರ್ 9ರಂದು ನೋಟು ಅಮಾನ್ಯೀಕರಣ ಘೋಷಣೆ ಹೊರಬಿದ್ದ ಬಳಿಕ ಈ ವರ್ಷದ ಜನವರಿ 10ರವರೆಗಿನ ಅವಧಿಯಲ್ಲಿ 5,400 ಕೋಟಿ ರೂ.ಗೂ ಮಿಕ್ಕಿದ ಅಘೋಷಿತ ಆದಾಯವನ್ನು ಘೋಷಿಸಲಾಗಿದೆ . ಅಲ್ಲದೆ ಈ ಅವಧಿಯಲ್ಲಿ ಜಪ್ತಿ ಮಾಡಲಾದ ಚಿನ್ನದ ಒಟ್ಟು ಮೊತ್ತ 303.367 ಕಿ.ಗ್ರಾಂ. ಆಗಿದೆ ಎಂದು ವಿತ್ತ ಸಚಿವಾಲಯ ಕೋರ್ಟಿಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದೆ.
ಎಪ್ರಿಲ್ 1, 2014ರಿಂದ ಫೆಬ್ರವರಿ 1, 2017ರವರೆಗಿನ ಅವಧಿಯಲ್ಲಿ 2,027ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ 36,051 ಕೋಟಿ ರೂ.ಗೂ ಮಿಕ್ಕಿದ ಅಘೋಷಿತ ಆದಾಯ ಪತ್ತೆಹಚ್ಚಲಾಗಿದೆ. ಇದರ ಜೊತೆಗೆ 2,890 ಕೋಟಿ ರೂ. ಮೊತ್ತದ ಅಘೋಷಿತ ಆಸ್ತಿ ಜಪ್ತಿ ಮಾಡಲಾಗಿದೆ.
ಇದೇ ಅವಧಿಯಲ್ಲಿ 15,000ಕ್ಕೂ ಹೆಚ್ಚು ಪರಿಶೀಲನೆ ನಡೆಸಲಾಗಿದ್ದು ಇದರಲ್ಲಿ 33,000 ಕೋಟಿ ರೂ.ಗೂ ಅಧಿಕ ಮೊತ್ತದ ಅಘೋಷಿತ ಆದಾಯ ಪತ್ತೆಹಚ್ಚಲಾಗಿದೆ. ನೋಟು ಅಮಾನ್ಯಗೊಳಿಸಿದ ಬಳಿಕದ ಎರಡು ತಿಂಗಳಲ್ಲೇ 1,100 ಶೋಧ ಕಾರ್ಯಾಚರಣೆ ಮತ್ತು 5,100 ದಾಖಲೆ ತಪಾಸಣಾ ಕಾರ್ಯ ನಡೆಸಿದ್ದು 513 ಕೋಟಿ ರೂ. ನಗದು ಸೇರಿದಂತೆ ಸುಮಾರು 610 ಕೋಟಿ ರೂ. ಮೊತ್ತದ ಅಘೋಷಿತ ಆದಾಯ ಜಪ್ತಿ ಮಾಡಲಾಗಿದೆ.
ನೋಟು ಅಮಾನ್ಯಗೊಂಡ ಬಳಿಕ ಆರಂಭದ ಎರಡು ತಿಂಗಳಾದ ನವೆಂಬರ್ ತಿಂಗಳಲ್ಲಿ 147.9 ಕೋಟಿ ರೂ. ಮೊತ್ತದ ನಗದು , ಡಿಸೆಂಬರ್‌ನಲ್ಲಿ 306.897 ಕೋಟಿ ರೂ. ವೌಲ್ಯದ ನಗದು ಜಪ್ತಿ ಮಾಡಲಾಗಿದೆ. ಇದೇ ಅವಧಿಯಲ್ಲಿ ಅನುಕ್ರಮವಾಗಿ 69.1 ಕಿ.ಗ್ರಾಂ ಹಾಗೂ 234.267 ಕಿ.ಗ್ರಾಂ. ಚಿನ್ನ ಜಪ್ತಿ ಮಾಡಲಾಗಿದೆ ಎಂದು ವಿತ್ತ ಸಚಿವಾಲಯ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ತಿಳಿಸಿದೆ.







