ಟೊಮ್ಯಾಟೋ ಕಾವಲಿಗೆ ನಿಂತ ಸಶಸ್ತ್ರ ಭದ್ರತಾ ಸಿಬ್ಬಂದಿ..!

ಭೋಪಾಲ್, ಜು.23: ಟ್ರಕ್ ಒಂದನ್ನು ಸುತ್ತುವರಿದ ಸಶಸ್ತ್ರ ಭದ್ರತಾ ಸಿಬ್ಬಂದಿ ಪಹರೆ ಕಾಯುತ್ತಿದ್ದಾರೆ. ಆದರೆ ಈ ಟ್ರಕ್ ನಲ್ಲಿ ಅಮೂಲ್ಯವಾದ ವಜ್ರಗಳೋ, ಚಿನ್ನಾಭರಣವೋ ಅಥವಾ ಹಣದ ರಾಶಿಯೋ ಇಲ್ಲ. ಬದಲಾಗಿ, ಅದರಲ್ಲಿರುವುದು ಟೊಮ್ಯಾಟೋ.?
ಈ ವರ್ಷದ ಆರಂಭದಲ್ಲಿ ಮಧ್ಯ ಪ್ರದೇಶದ ರೈತರು ಬೆಲೆ ಕುಸಿತದಿಂದ ಕಂಗೆಟ್ಟು ತಾವು ಬೆಳೆದ ಟೊಮ್ಯಾಟೋಗಳನ್ನು ರಸ್ತೆಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಸಂದರ್ಭ ಟೊಮ್ಯಾಟೋ ಬೆಲೆ 1 ರೂ.ಗೂ ಕಮ್ಮಿಯಿತ್ತು. ಆದರೆ ಇದೀಗ ಟೊಮ್ಯಾಟೋ ತರಕಾರಿಗಳಲ್ಲೇ ಅತಿ ದುಬಾರಿ ಎನಿಸಿಕೊಂಡಿದೆ. ಹೀಗಾಗಿ ಇಂದೋರ್ ನ ದೇವಿ ಅಹಿಲ್ಯಾ ಭಾಯ್ ಹೋಲ್ಕರ್ ತರಕಾರಿ ಮಂಡಿಯಲ್ಲಿ ಟೊಮ್ಯಾಟೋಗಳು ಕಳ್ಳತನವಾಗದಂತೆ ಕಾಪಾಡಲು ಸಶಸ್ತ್ರ ಭದ್ರತಾ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.
ಟೊಮ್ಯಾಟೋ ಪೂರೈಕೆಯ ಕೊರತೆಯಿಂದಾಗಿ ಅದರ ದರ ಏಕಾಏಕಿ ಕಿಲೋವೊಂದಕ್ಕೆ 100 ರೂ. ಆಗಿದೆ.
“ಜುಲೈ 15ರಂದು ಕಳ್ಳರು ಟೊಮ್ಯಾಟೊ ಟ್ರಕ್ ಒಂದರ ಮೇಲೆ ದಾಳಿ ನಡೆಸಿ 2600 ಕೆ.ಜಿ. ಟೊಮ್ಯಾಟೋ ಲೂಟಿ ಮಾಡಿದ್ದರು. ಆದ್ದರಿಂದ ಸಶಸ್ತ್ರ ಸಿಬ್ಬಂದಿಯನ್ನು ನೇಮಿಸಲಾಗಿದೆ” ಎಂದು ಮಂಡಿಯ ವ್ಯಾಪಾರಿಯೊಬ್ಬರು ಹೇಳುತ್ತಾರೆ.
ಟೊಮ್ಯಾಟೋವನ್ನು ಸುರಕ್ಷಿತವಾಗಿರಲು ಉದ್ಯಮಿಯೊಬ್ಬರು ಮಂಡಿಯ ಆಡಳಿತದಲ್ಲಿ ಕೇಳಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸಶಸ್ತ್ರ ಸಿಬ್ಬಂದಿಗೆ ಸುರಕ್ಷತೆಯ ಜವಾಬ್ದಾರಿಯನ್ನು ವಹಿಸಲಾಗಿದೆ.







