ಹೊಸ ಆನ್‌ಲೈನ್ ಯೋಧರ ಪಡೆ ಕಟ್ಟಲು ಸಜ್ಜಾಗಿದೆ ಆರೆಸ್ಸೆಸ್
ಆದಿತ್ಯನಾಥ್ ನೇತೃತ್ವದಲ್ಲಿ ಬೃಹತ್ ಸಮಾವೇಶ

ಹೊಸದಿಲ್ಲಿ,ಜು.23: ಈಗ ಹಿಂದುವಾದ ಮತ್ತು ಹಿಂದುತ್ವದ ರಕ್ಷಣೆ ಹಾಗೂ ಪ್ರಸಾರಕ್ಕಾಗಿ ಆನ್‌ಲೈನ್ ಯೋಧರ ಪಡೆಯೊಂದು ತಲೆಯೆತ್ತಲಿದೆ.
ಈ ವರ್ಷದ ನವೆಂಬರ್‌ನಲ್ಲಿ ಉತ್ತರ ಪ್ರದೇಶದ ಕಾಶಿಯಲ್ಲಿ ಬೃಹತ್ ‘ಹಿಂದೂವಾದ ಮತ್ತು ಸಾಮಾಜಿಕ ಮಾಧ್ಯಮ ಸಮಾವೇಶ’ವನ್ನು ಏರ್ಪಡಿಸಲು ಆರೆಸ್ಸೆಸ್-ಬಿಜೆಪಿ ಜೊತೆ ಸಂಯೋಜಿತ ಚಿಂತನ ಚಿಲುಮೆ ಭಾರತ್ ನೀತಿ ಪ್ರತಿಷ್ಠಾನವು ಯೋಜಿಸಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಎಡಪಂಥೀಯ ಸಿದ್ಧಾಂತಗಳು ಅಥವಾ ಇಸ್ಲಾಮಿಕ್ ವಾದದಿಂದ ಪ್ರಭಾವಿತ ಜನರು ಆನ್‌ಲೈನ್ ವೇದಿಕೆಗಳಲ್ಲಿ ಹಿಂದುತ್ವವನ್ನು ಅವಮಾನಿಸುತ್ತಿದ್ದು ಮತ್ತು ಅದರ ಧಾರ್ಮಿಕ ಚಿಹ್ನೆಗಳನ್ನು ವಿರೂಪಗೊಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಪ್ರತಿಷ್ಠಾನವು ಅದನ್ನು ಎದುರಿಸಲು ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳ ನಂಟು ಹೊಂದಿರುವ ತನ್ನ ಕಾರ್ಯಕರ್ತರನ್ನು ಬಳಸಿಕೊಂಡು ಆನ್‌ಲೈನ್ ಯೋಧರ ಪಡೆಯನ್ನು ಸೃಷ್ಟಿಸಲು ಉದ್ದೇಶಿಸಿದೆ.
ಅವಹೇಳನದ ವಿರುದ್ಧ ಹಿಂದುತ್ವವನ್ನು ರಕ್ಷಿಸಲು ಆನ್‌ಲೈನ್ ಮಾರ್ಗವನ್ನು ಹಿಡಿಯುವ ಪ್ರತಿಷ್ಠಾನದ ಉದ್ದೇಶವು ಸಾಮಾಜಿಕ ಮಾಧ್ಯಮಗಳಲ್ಲಿ ಸಂಘಪರಿವಾರದ ಅಂಗಸಂಸ್ಥೆಗಳ ಉಪಸ್ಥಿತಿಗೆ ಅನುಗುಣವಾಗಿರುವಂತಿದೆ. ಅಲ್ಲದೆ ಪ್ರಧಾನಿಯವರು ಟ್ವಿಟರ್‌ನಲ್ಲಿ ಅತಿ ಹೆಚ್ಚಿನ ಹಿಂಬಾಲಕರನ್ನು ಹೊಂದಿರುವ ವಿಶ್ವನಾಯಕರಲ್ಲಿ ಒಬ್ಬರಾಗಿರುವುದೂ ಇದಕ್ಕೆ ಒತ್ತು ನೀಡಿರುವಂತಿದೆ.
ಆನ್‌ಲೈನ್ ಮತ್ತು ಟ್ವಿಟರ್, ವಾಟ್ಸಾಪ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಹಿಂದುವಾದವನ್ನು ಹೇಗೆ ರಕ್ಷಿಸಬಹುದು ಮತ್ತು ಹರಡಬಹುದು ಎನ್ನುವ ಬಗ್ಗೆ ಸಮಾವೇಶವು ಚರ್ಚಿಸಲಿದೆ.
"ಕಿಡಿಗೇಡಿಗಳು ಹಿಂದುಗಳ ಭಾವನೆಗಳನ್ನು ನೋಯಿಸಲು ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ಅವಹೇಳನಕಾರಿ ಬರಹ, ಚಿತ್ರಗಳನ್ನು ಪೋಸ್ಟ್ ಮಾಡುತ್ತಿರುವುದು ಇಗ ದಿನನಿತ್ಯದ ಕೆಲಸವಾಗಿಬಿಟ್ಟಿದೆ. ಅವರು ನಮ್ಮ ದೇವರು ಮತ್ತು ದೇವಿಯರನ್ನು ಗೇಲಿ ಮಾಡುತ್ತಿದ್ದಾರೆ. ಹೆಚ್ಚಿನ ಸಂದರ್ಭ ಅವರ ಪೋಸ್ಟ್‌ಗಳು ಗೇಲಿ ಮಾಡುವುದಕ್ಕಿಂತ ನೇರವಾಗಿ ದೈವನಿಂದೆಯನ್ನು ಮಾಡುತ್ತಿವೆ. ಇದನ್ನು ನಿಲ್ಲಿಸುವುದು ಮತ್ತು ಇಂತಹ ಪ್ರಚಾರವನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ನಾವು ಕಾಶಿಯಲ್ಲಿ ಚರ್ಚಿಸಲಿದ್ದೇವೆ. ಜೊತೆಗೆ ಸಾಮಾಜಿಕ ಮಾಧ್ಯಮಗಳು ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಹಿಂದುತ್ವವನ್ನು ಹರಡುವ ಬಗ್ಗೆಯೂ ನಾವು ಚಿಂತನೆ ನಡೆಸಲಿದ್ದೇವೆ" ಎಂದು ಭಾರತ ನೀತಿಯ ಆಡಳಿತ ಮಂಡಳಿಯ ಸದಸ್ಯ ಹಾಗೂ ಬಿಜೆಪಿ ಕಿಸಾನ್ ಮೋರ್ಚಾದ ಉಪಾಧ್ಯಕ್ಷ ಶೈಲೇಂದ್ರ ಸೆಂಗರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮುರಳಿಧರ ರಾವ್ ಅವರಂತಹ ಬಿಜೆಪಿ-ಆರೆಸ್ಸೆಸ್ ಸಿದ್ಧಾಂತವಾದಿಗಳು, ಇಷಾ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ, ಪತಂಜಲಿಯ ಆಚಾರ್ಯ ಬಾಲಕೃಷ್ಣ ಮುಂತಾದ ಗಣ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.







