ತುಳಿತಕ್ಕೊಳಗಾದ ಮುಖಂಡರಿಗೆ ಸೂಕ್ತ ಸ್ಥಾನ: ಬಿಎಸ್‌ವೈ ಭರವಸೆ

ಬೆಂಗಳೂರು, ಜು.23: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತುಳಿತಕ್ಕೊಳಗಾದ ಸಮುದಾಯಗಳ ಮುಖಂಡರನ್ನು ಗುರುತಿಸಿ ಸ್ಥಾನಮಾನ ನೀಡಲಾಗುವುದೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ರವಿವಾರ ಅರಮನೆ ಮೈದಾನದಲ್ಲಿ ವಿಶ್ವಕರ್ಮ ಮಹಾಸಭಾ ಆಯೋಜಿಸಿದ್ದ ಬಿಜೆಪಿಯ ಎಲ್ಲ ಹಿರಿಯ ನಾಯಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ತಾವು ಭರವಸೆ ನೀಡಲ್ಲ. ಆದರೆ, ಭರವಸೆ ನೀಡಿದರೆ ಆ ಭರವಸೆಯನ್ನು ಈಡೇರಿಸದೆ ಬೀಡುವುದಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿಲ್ಲ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದು, ರಾತ್ರಿ ವೇಳೆ ಮಹಿಳೆಯರು ವೃದ್ಧರು ನಗರದಲ್ಲಿ ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಪಾದಿಸಿದರು.
ರಾಜ್ಯದಲ್ಲಿ 35 ಲಕ್ಷ ವಿಶ್ವಕರ್ಮರಿದ್ದು, ಮುಂಬರುವ ಚುನಾವಣೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಈ ಜನಾಂಗದ ಮುಖಂಡರಿಗೆ ಹಲವು ಜವಾಬ್ದಾರಿ ನೀಡಲಾಗುವುದು. ಅಲ್ಲದೆ, ಮುಖಂಡ ಕೆ.ಪಿ.ನಂಜುಂಡಿ ಅವರು ಹಿಂದುಳಿದ ವರ್ಗಗಳ ಜವಾಬ್ದಾರಿ ವಹಿಸಿಕೊಳ್ಳುವುದಾದರೆ ಅದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು. ಮುಂದಿನ ದಿನಗಳಲ್ಲಿ ಕೆ.ಪಿ.ನಂಜುಂಡಿ ಅವರು ಬೃಹತ್ ಸಮಾವೇಶವನ್ನು ಏರ್ಪಡಿಸಲಿದ್ದು, ಆ ಸಮಾವೇಶದಲ್ಲಿಯೆ ನಂಜುಂಡಿ ಅವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸನ್ಮಾನಿಸಲಿದ್ದಾರೆಂದು ತಿಳಿಸಿದರು.
ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಯಾರನ್ನೂ ಉದ್ಧಾರ ಮಾಡಲ್ಲ. ಅದರ ಕೆಲಸ ಏನಿದ್ದರೂ ನುಂಗಿ ಹಾಕುವುದು. ಈಗಾಗಲೇ ಬಿಎಸ್‌ವೈ ಅವರು ಸಿಎಂ ಆಗಿದ್ದಾಗ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳನ್ನು ನಿರ್ಲಕ್ಷಿಸಿದ್ದಾರೆ. ಹಾಗೆಯೇ ಹಿಂದುಳಿದ ನಾಯಕರನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ಅವರನ್ನು ಹೊರಕ್ಕೆ ಹಾಕಿದ್ದಾರೆ ಎಂದು ಆಪಾದಿಸಿದರು. ಕಾಂಗ್ರೆಸ್ ಸರಕಾರ ಸಿಐಡಿ ಹಾಗೂ ಎಸಿಬಿಯನ್ನು ಬಳಸಿಕೊಂಡು ಸಚಿವ ಕೆ.ಜೆ. ಜಾರ್ಜ್ ಹಾಗೂ ಮೇಟಿ ಅಂಥವರಿಗೆ ಕ್ಲೀನ್‌ಚೀಟ್ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡವನ್ನು ಬಯಲಿಗೆ ಎಳೆದ ಡಿ.ರೂಪಾ ಅವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಿ ಅಧಿಕಾರಿಗಳಲ್ಲಿನ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದ್ದಾರೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಕ್ಷೇತ್ರದಲ್ಲಿ ತಹಶೀಲ್ದಾರ್ ಅವರ ಕೊಲೆಯಾಗಿದ್ದರೂ, ತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಈ ತಹಶೀಲ್ದಾರ್ ಅವರ ಕೊಲೆ ಮರಳು ಮಾಫಿಯಾದಿಂದಲೇ ನಡೆದಿದೆ ಎಂದು ಆಪಾದಿಸಿದರು. ಯಡಿಯೂರಪ್ಪ ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿಯಾದರೆ ವಿಶ್ವಕರ್ಮ ಜನಾಂಗದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಉಪಾಧ್ಯಕ್ಷ ಕೆ.ಪಿ.ನಂಜುಂಡಿ ಮಾತನಾಡಿ, ಹಿಂದುಳಿದ ನಾಯಕರು ಎಂದು ಹೇಳಿಕೊಂಡು ಸಿಎಂ ಹುದ್ದೆಗೆ ಏರಿದ ಸಿದ್ದರಾಮಯ್ಯ ಅವರು ಹಿಂದುಳಿದ ನಾಯಕರನ್ನು ತುಳಿಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು. ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಹಿಂದುಳಿದ ಸಮಾಜವನ್ನು ಯಾವುದೇ ರೀತಿಯಿಂದಲೂ ಉದ್ಧಾರ ಮಾಡಲಿಲ್ಲ. ಹಾಗೆಯೇ ಸಿದ್ದರಾಮಯ್ಯ ಕೂಡ ಅರಸುರಂತೆ ಹಿಂದುಳಿದವರನ್ನು ಉದ್ಧಾರ ಮಾಡುವ ಕೆಲಸ ಮಾಡಲಿಲ್ಲ ಎಂದು ಹೇಳಿದರು.
ಬಿಜೆಪಿ ಪಕ್ಷ ತಮ್ಮನ್ನು ಏನು ಮಾಡದಿದ್ದರೂ ಪರವಾಗಿಲ್ಲ. ಆದರೆ, ನಮ್ಮ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು. ಹಾಗೂ ನಮ್ಮ ಜನಾಂಗದ ಮಕ್ಕಳೂ ಉನ್ನತ ಸ್ಥಾನಮಾನಗಳನ್ನು ಗಳಿಸುವಂತೆ ಮಾಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ಸಂಸದ ಪಿ.ಸಿ.ಮೋಹನ್, ವಿಶ್ವಕರ್ಮ ಪೀಠಾಧಿಪತಿ ಕಾಳಹಸ್ತೇಂದ್ರ ಸ್ವಾಮಿ ಹಾಜರಿದ್ದರು.







