ಆಸ್ತಿ ವಿವಾದ: ತಂದೆಯ ಕೊಲೆಯಲ್ಲಿ ಅಂತ್ಯ

ಮಂಡ್ಯ, ಜು.23: ಆಸ್ತಿ ಹಂಚಿಕೆ ವಿಚಾರದಲ್ಲಿ ತಂದೆ-ಮಗನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತಂದೆಯ ಕೊಲೆಯೊಂದಿಗೆ ಅಂತ್ಯಕಂಡ ಘಟನೆ ಕೃಷ್ಣರಾಜಪೇಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
ಬೊಮ್ಮೇಗೌಡ(54) ಎಂಬವರೇ ಮಗ ಬೀಸಿದ ಕೊಡಲಿ ಏಟಿಗೆ ಬಲಿಯಾದ ತಂದೆಯಾಗಿದ್ದು, ಅವರ ಎರಡನೆ ಪುತ್ರ ಮಂಜೇಗೌಡ(24) ಈ ಕೃತ್ಯವೆಸಗಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ವಿವರ: ಜಮೀನಿನ ಬಳಿ ತೆಂಗಿನ ಕಾಯಿ ಕೀಳುತ್ತಿದ್ದ ಸಂದರ್ಭ ಆಸ್ತಿ ಹಂಚಿಕೆ ವಿಚಾರವಾಗಿ ಬೊಮ್ಮೇಗೌಡ- ಮಂಜೇಗೌಡ ನಡುವೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ತಿರುಗಿ ಮಂಜೇಗೌಡ ಕೊಡಲಿಯಿಂದ ಬೊಮ್ಮೇಗೌಡರ ತಲೆಗೆ ಹೊಡೆದಿದ್ದಾನೆ.
ಏಟುಬಿದ್ದ ತಕ್ಷಣ ಬೊಮ್ಮೇಗೌಡ ಓಡಿ ಹೋಗಿ ಪಕ್ಕದ ಕಬ್ಬಿನಗದ್ದೆ ಹೊಕ್ಕಿದ್ದಾರೆ. ಆದರೂ, ಬಿಡದ ಮಂಜೇಗೌಡ ಅಲ್ಲಿಗೇ ತೆರಳಿ ಮತ್ತೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಬೊಮ್ಮೇಗೌಡರ ಸಂಬಂಧಿ ಶಂಕರ್ ಎಂಬವರು ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ನಾಗಮಂಗಲ ಡಿವೈಎಸ್‌ಪಿ ಚಂದ್ರಶೇಖರ್, ಸಿಪಿಐ ವೆಂಕಟೇಶಯ್ಯ, ಪಿಎಸ್‌ಐ ಆರ್.ಸಿದ್ದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.







