ಮುಸ್ಲಿಂ ಮಹಿಳೆಯ ಹಿಜಾಬ್ ಎಳೆದು ಹಲ್ಲೆ ನಡೆಸಿದ ದುಷ್ಕರ್ಮಿ
ಲಂಡನ್‌ನಲ್ಲಿ ಮರುಕಳಿಸಿದ ಜನಾಂಗೀಯ ದ್ವೇಷದ ಘಟನೆ

ಲಂಡನ್, ಜು.23: ಬ್ರಿಟನ್‌ನಲ್ಲಿ ಜನಾಂಗೀಯ ದ್ವೇಷದ ಇನ್ನೊಂದು ಘಟನೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ದಾಳಿ ನಡೆಸಿ, ಆಕೆ ಧರಿಸಿದ್ದ ಹಿಜಾಬ್‌ನ್ನು ಎಳೆಯಲು ಯತ್ನಿಸಿದ್ದಾನೆ. ಹಲ್ಲೆಗೊಳಗಾದ ಯುವತಿಯನ್ನು ಅನಿಸಾ ಅಬ್ದುಲ್‌ಖಾದಿರ್ ಎಂದು ಗುರುತಿಸಲಾಗಿದೆ.
ಸಂತ್ರಸ್ತ ಮಹಿಳೆಯು ಕಳೆದ ರವಿವಾರ ಲಂಡನ್‌ನ ಬೇಕರ್ ಸ್ಟ್ರೀಟ್ ರೈಲು ನಿಲ್ದಾಣದಲ್ಲಿ, ರೈಲಿಗಾಗಿ ಕಾಯುತ್ತಾ ನಿಂತಿದ್ದಾಗ, ಕಿಡಿಗೇಡಿಯೊಬ್ಬ ಆಕೆಯ ಹಿಜಾಬನ್ನು ಎಳೆದಾಡಿದ್ದಾನೆ. ಹಾಗೂ ಆಕೆಯ ಗೆಳತಿಯೊಬ್ಬಳನ್ನು ಗೋಡೆಗೆ ಒತ್ತಿಹಿಡಿದು, ಮುಖಕ್ಕೆ ಉಗುಳಿದ್ದಾನೆ ಎಂದು ಬಿಬಿಸಿ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.
ಆತನ ಜೊತೆಗಿದ್ದ ಮಹಿಳೆ ಕೂಡಾ ತನಗೆ ಬೆದರಿಕೆಯೊಡ್ಡಿದಳು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದಳೆಂದು ಅನಿಸಾ ಅಬ್ದುಲ್ ಖಾದಿರ್ ಆರೋಪಿಸಿದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಟಿಶ್ ಸಾರಿಗೆ ಪೊಲೀಸ್ ಇಲಾಖೆಯ ವಕ್ತಾರರು, ಇದೊಂದು ದ್ವೇಷ ಕೃತ್ಯವೆಂದು ಪರಿಗಣಿಸಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಆದಾಗ್ಯೂ, ಮುಸ್ಲಿಂ ಯುವತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಪವೆಲ್ ಯ್ಯೂಸಿಜ್, ತನ್ನ ವಿರುದ್ಧದ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಇದೊಂದು ಸುಳ್ಳು ಸುದ್ದಿಯೆಂದು ಹೇಳಿದ್ದಾನೆ. ಹಲ್ಲೆಗೊಳಗಾಗಿದ್ದೇವೆಂದು ಆರೋಪಿಸಿದ ಮಹಿಳೆಯರು ನನ್ನ ಜೊತೆಗಾತಿಯ ಮೇಲೆ ದಾಳಿಗೆ ಯತ್ನಿಸಿದ್ದರು. ನಮ್ಮಿಬ್ಬರದು ಅಂತರ್‌ಜನಾಂಗೀಯ ಸಂಬಂಧವಾಗಿದ್ದು, ಈ ಮೂವರು ಮಹಿಳೆಯರು ಅದನ್ನು ಆಕ್ಷೇಪಿಸಿ ನನ್ನ ಜೊತೆಗಾತಿಯ ಮೇಲೆ ಹಲ್ಲೆ ನಡೆಸಿದರೆಂದು ಪವೆಲ್ ಆಪಾದಿಸಿದ್ದಾರೆ.
ಲಂಡನ್ ದಾಳಿ ಘಟನೆಯ ಬಳಿಕ ಬ್ರಿಟನ್‌ನಲ್ಲಿ ಮುಸ್ಲಿಮರ ಮೇಲಿನ ಹಲ್ಲೆಗಳ ಹಲವು ಪ್ರಕರಣಗಳು ವರದಿಯಾಗಿವೆ. ಇಂತಹವರ ಪ್ರಕರಣಗಳನ್ನು ನಿಭಾಯಿಸುವಾಗ ಪೊಲೀಸರು ಶೂನ್ಯ ಸಹಿಷ್ಣುತೆಯನ್ನು ಪ್ರದರ್ಶಿಸಬೇಕೆಂದು ಲಂಡನ್ ಮೇಯರ್ ಸಾದಿಕ್ ಖಾನ್ ಕರೆ ನೀಡಿದ್ದಾರೆ.







