ಹೊದಿಕೆಗಳ ಅನೈರ್ಮಲ್ಯ: ಮತ್ತೆ ಸಿಎಜಿ ತರಾಟೆಗೆ ಗುರಿಯಾದ ಭಾರತೀಯ ರೈಲ್ವೆ

ಹೊಸದಿಲ್ಲಿ,ಜು.23: ರೈಲುಗಳಲ್ಲಿನ ಕಳಪೆ ಆಹಾರದ ಬಗ್ಗೆ ಇತ್ತೀಚಿಗಷ್ಟೇ ಭಾರತೀಯ ರೈಲ್ವೆಯನ್ನು ಕಟುವಾಗಿ ಟೀಕಿಸಿದ್ದ ಮಹಾ ಲೇಖಪಾಲ(ಸಿಎಜಿ)ರ ಕಚೇರಿಯು ಈಗ ಪ್ರಯಾಣಿಕರಿಗೆ ಒದಗಿಸಲಾಗುವ ಹಾಸಿಗೆ-ಹೊದಿಕೆಗಳ ಅನೈರ್ಮಲ್ಯದ ಬಗ್ಗೆ ಅದನ್ನು ಮತ್ತೊಮ್ಮೆ ತೀವ್ರ ತರಾಟೆಗೆತ್ತಿಕೊಂಡಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾ ಗಲು ಸೂಕ್ತ ವ್ಯವಸ್ಥೆಯನ್ನು ರೂಪಿಸುವಂತೆ ಅದು ರೈಲ್ವೆ ಇಲಾಖೆಗೆ ನಿರ್ದೇಶ ನೀಡಿದೆ.
ರೈಲ್ವೆಯಲ್ಲಿ ಸ್ಥಾಪಿತ ನಿಯಮಗಳಂತೆ ಹಾಸುಬಟ್ಟೆ ಮತ್ತು ಹೊದಿಕೆಗಳನ್ನು ಸ್ವಚ್ಛಗೊಳಿಸ ಲಾಗುತ್ತಿಲ್ಲ ಎಂದು ಸಿಎಜಿ ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಲಾದ ತನ್ನ ವರದಿಯಲ್ಲಿ ಹೇಳಿದೆ.
ಹಾಸುಬಟ್ಟೆಗಳನ್ನು ಪ್ರತಿ ಬಾರಿ ಬಳಕೆಯ ಬಳಿಕ ಒಗೆಯಬೇಕು ಮತ್ತು ಹೊದಿಕೆಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಡ್ರೈ ಕ್ಲೀನ್ ಮಾಡಬೇಕು ಎಂದು ರೈಲ್ವೆ ಮಂಡಳಿಯು ಸೂಚಿಸಿದೆ.
ವಿವಿಧ ರೈಲ್ವೆ ವಲಯಗಳಿಂದ ಸಿಎಜಿ ಸಂಗ್ರಹಿಸಿರುವ ದತ್ತಾಂಶಗಳು ಹಾಸುಬಟ್ಟೆಗಳನ್ನು 15 ದಿನಗಳು/ತಿಂಗಳಿಗೊಮ್ಮೆ ಒಗೆಯಲಾಗುತ್ತದೆ ಮತ್ತು ಬ್ಲಾಂಕೆಟ್‌ಗಳನ್ನು 2-3 ತಿಂಗಳ ಬಳಿಕವೇ ಡ್ರೈ ಕ್ಲೀನ್ ಮಾಡಲಾಗುತ್ತದೆ ಎನ್ನುವುದನ್ನು ಬೆಳಕಿಗೆ ತಂದಿವೆ ಎಂದು ವರದಿಯು ಹೇಳಿದೆ.
ಸಿಎಜಿ 33 ಆಯ್ದ ಡಿಪೋಗಳಿಂದ 2012-13ನೇ ಸಾಲಿನಿಂದ 2015-16ನೇ ಸಾಲಿನವರೆಗೆ ಅವಧಿಯಲ್ಲಿ ಬಳಕೆಯಲ್ಲಿದ್ದ ಮತ್ತು ಒಗೆಯಲಾಗಿದ್ದ ಹೊದಿಕೆಗಳ ಸಂಖ್ಯೆಯ ಕುರಿತು ದತ್ತಾಂಶಗಳನ್ನು ಸಂಗ್ರಹಿಸಿದೆ.
ಒಂಭತ್ತು ರೈಲ್ವೆ ವಲಯಗಳ 14 ಆಯ್ದ ಡಿಪೊಗಳಲ್ಲಿ ಈ ಅವಧಿಯಲ್ಲಿ ಒಂದು ಬಾರಿಯೂ ಹೊದಿಕೆಗಳನ್ನು ಡ್ರೈವಾಷ್ ಮಾಡಿಲ್ಲ. ಐದು ರೈಲ್ವೆ ವಲಯಗಳಡಿ ಏಳು ಡಿಪೋಗಳನ್ನು ಹೊರತುಪಡಿಸಿ ಇತರ ಕಡೆಗಳಲ್ಲಿ ಒಮ್ಮೆಯೂ ಹೊದಿಕೆಗಳನ್ನು ಸ್ವಚ್ಛಗೊಳಿ ಸಲಾಗಿಲ್ಲ ಎನ್ನುವುದನ್ನು ಸಿಎಜಿ ಪತ್ತೆ ಹಚ್ಚಿದೆ.
2015-16ನೇ ಸಾಲಿನಲ್ಲಿ ಎಂಟು ರೈಲ್ವೆ ವಲಯಗಳಡಿಯ 12 ಡಿಪೊಗಳಲ್ಲಿ 6-26 ತಿಂಗಳ ವಿರಾಮದ ಬಳಿಕ ಹೊದಿಕೆಗಳನ್ನು ಸ್ವಚ್ಚಗೊಳಿಸಲಾಗಿದೆ ಎಂದೂ ವರದಿಯು ತಿಳಿಸಿದೆ.
ರೈಲ್ವೆಯ ಜನರಲ್ ಸ್ಟೋರ್‌ಗಳಲ್ಲಿ ಹೊಸ ಹೊದಿಕೆಗಳ ಜೊತೆಗೆ ಎಸೆಯಬೇಕಾಗಿದ್ದ ಹೊದಿಕೆಗಳನ್ನೂ ಪೇರಿಸಿಟ್ಟಿದ್ದು ಕಂಡು ಬಂದಿದೆ. ಚೆನ್ನೈನ ಬೇಸಿನ್ ಬ್ರಿಡ್ಜ್ ಡಿಪೋದಲ್ಲಿ ಕೊರತೆಯನ್ನು ನೀಗಿಸಲು ಬಳಸಿದ ಬೆಡ್‌ಶೀಟ್‌ಗಳಿಂದ ತಲೆದಿಂಬುಗಳ ಹೊದಿಕೆಗಳನ್ನು ಹೊಲಿಯಲಾಗುತ್ತಿದೆ. ಉತ್ತರ ರೆಲ್ವೆಯ ಕೆಲವು ಕಡೆಗಳಲ್ಲಿ ಪ್ರಯಾಣಿಕರಿಗೆ ಬಳಸಿದ ತಲೆದಿಂಬು ಹೊದಿಕೆಗಳನ್ನೇ ನೀಡಲಾಗುತ್ತಿದೆ ಎಂದು ವರದಿಯು ತಿಳಿಸಿದೆ.
ಹಲವಾರು ದಾಸ್ತಾನು ಡಿಪೋಗಳಲ್ಲಿ ಹೊಸ ಹೊದಿಕೆಗಳನ್ನು ಅಸ್ತವ್ಯಸ್ತವಾಗಿ, ಧೂಳಿನ ನಡುವೆಯೇ ಇಡಲಾಗಿದೆ ಎಂದೂ ಅದು ಹೇಳಿದೆ. ಕೆಲವು ಡಿಪೋಗಳಲ್ಲಿ ಇಂತಹ ಹೊದಿಕೆಗಳ ಜೀವಿತಾವಧಿ ಮುಗಿದರೂ ಅವುಗಳು ಬಳಕೆಯಾಗಿಲ್ಲ ಎಂದು ಅದು ಬೊಟ್ಟು ಮಾಡಿದೆ.







